ಶ್ರೀನಗರ, ಸೆ 04 (DaijiworldNews/DB): ಕಾಂಗ್ರೆಸ್ ಪಕ್ಷದಲ್ಲಿ ರಾಜೀನಾಮೆ ಪರ್ವ ಮುಂದುವರಿದಿದೆ. ಗುಲಾಂ ನಬಿ ಆಜಾದ್ ಅವರ ಬಳಿಕ 50ಕ್ಕೂ ಹೆಚ್ಚು ಹಿರಿಯ ಕಾಂಗ್ರೆಸ್ಸಿಗರು ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಅಶೋಕ್ ಶರ್ಮಾ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಶರ್ಮಾ ಅವರು ಪತ್ರ ಬರೆದಿದ್ದು, ಪಕ್ಷಕ್ಕೆ ತಾನು ರಾಜೀನಾಮೆ ನೀಡುತ್ತಿದ್ದೇನೆ. ಸದ್ಯದ ಪರಿಸ್ಥಿತಿ ಮತ್ತು ಅನಿವಾರ್ಯತೆಯೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಎಐಸಿಸಿಯ 'ವಿಚಾರ್ ವಿಭಾಗ್'ನ ರಾಷ್ಟ್ರೀಯ ಸಂಚಾಲಕ ಮತ್ತು ಪ್ರದೇಶ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿರುವ ಶರ್ಮಾ ಅವರು ಇದೀಗ ರಾಜೀನಾಮೆ ನೀಡಿರುವುದು ಕಾಂಗ್ರೆಸ್ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಕಾಂಗ್ರೆಸ್ ಪಕ್ಷವನ್ನು ಹೃದಯಪೂರ್ವಕವಾಗಿ ಗೌರವಿಸುತ್ತಿದ್ದೆ. ತಳಮಟ್ಟದಿಂದ ಹಿಡಿದು ವಿವಿಧ ರಾಜ್ಯಗಳಲ್ಲಿಯೂ ಪಕ್ಷ ಸಂಘಟನೆಗೆ ಅವಿರತ ಶ್ರಮಿಸಿದ್ದೇನೆ ಎಂದವರು ಇದೇ ವೇಳೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೇ ಆನಂದ್ ಶರ್ಮಾ, ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದರು. ಗುಲಾಂ ನಬಿ ಅವರನ್ನು ಬೆಂಬಲಿಸಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಉಪ ಮುಖ್ಯಮಂತ್ರಿ ತಾರಾ ಚಂದ್ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಹಿರಿಯ ಕಾಂಗ್ರೆಸ್ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.