ಇಂದೋರ್, ಸೆ 04 (DaijiworldNews/DB): ವಿಮಾನ ನಿಲ್ದಾಣದಲ್ಲಿ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ ಮತ್ತು ಮನೋಜ್ ತಿವಾರಿ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ದೂರು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತನಿಖೆಯಿಂದ ಸತ್ಯ ಹೊರ ಬರಲಿದೆ ಎಂದಿದ್ದಾರೆ.
ಇಂದೋರ್ನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸಂಬಂಧ ತನಿಖೆ ನಡೆಯುತ್ತಿದೆ. ತನಿಖೆಯ ಬಳಿಕ ಸತ್ಯ ಹೊರಬರಲಿದೆ ಎಂದರು.
ಜಾರ್ಖಂಡ್ನ ದುಮ್ಕಾದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬ ಸದಸ್ಯರನ್ನು ಆಗಸ್ಟ್ 31ರಂದು ಭೇಟಿಯಾಗಿ ದೆಹಲಿಗೆ ಹಿಂತಿರುಗುವ ವೇಳೆ ಇಬ್ಬರು ಸಂಸದರು ಮತ್ತು ಇತರ ಏಳು ಮಂದಿ ಜಾರ್ಖಂಡ್ನ ದೇವಘರ ವಿಮಾನ ನಿಲ್ದಾಣದಲ್ಲಿ ಗಲಾಟೆ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು.
ಚಾರ್ಟೆಡ್ ವಿಮಾನ ಹಾರಾಟಕ್ಕೆ ರನ್ವೇಯನ್ನು ಶೀಘ್ರ ಮುಕ್ತಗೊಳಿಸಿಕೊಡಬೇಕು ಎಂದು ವಾಯು ಸಂಚಾರ ನಿಯಂತ್ರಣ (ಎಟಿಸಿ) ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿ ಒಂಬತ್ತು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.