ಕೋಲ್ಕತ್ತಾ, ಸೆ 04 (DaijiworldNews/DB): ಘನ ಮತ್ತು ದ್ರವ ತ್ಯಾಜ್ಯದ ಉತ್ಪಾದನೆ, ಸಂಸ್ಕರಣೆಯಲ್ಲಿ ಕಳಪೆ ನಿರ್ವಹಣೆ ತೋರಿದ ಕಾರಣಕ್ಕಾಗಿ ಪಶ್ಚಿಮ ಬಂಗಾಳ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ 3,500 ಕೋಟಿ ರೂ. ದಂಡ ವಿಧಿಸಿದೆ. ಮುಂದಿನ ಎರಡು ತಿಂಗಳೊಳಗೆ ದಂಡ ಪಾವತಿಗೆ ಸೂಚಿಸಿದೆ.
2022-23ರ ಬಜೆಟ್ ಪ್ರಕಾರ ನಗರಾಭಿವೃದ್ಧಿ ಹಾಗೂ ಪುರಸಭೆಗಳ ವ್ಯವಹಾರಕ್ಕಾಗಿ 12,818 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿತ್ತು. ಆದರೆ ಅದನ್ನು ಸದ್ವಿನಿಯೋಗ ಪಡಿಸಿಕೊಂಡು ಘನ ಮತ್ತು ದ್ರವ ತ್ಯಾಜ್ಯದ ಉತ್ಪಾದನೆ, ಸಂಸ್ಕರಣೆಯಲ್ಲಿ ಸೂಕ್ತ ನಿರ್ವಹಣೆ ಮಾಡಿಲ್ಲ. ಈ ಸಂಬಂಧ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಹಸಿರು ನ್ಯಾಯಪೀಠ ಮಮತಾ ಬ್ಯಾನರ್ಜಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ತ್ಯಾಜ್ಯ ನಿರ್ವಹಣೆ ಸರಿಯಾಗಿರದಿದ್ದರೆ ಭವಿಷ್ಯದಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುಬಹುದು ಎಂಬ ಅಂಶಯವನ್ನು ಗಮನಿಸಿ ಎನ್ಜಿಟಿ ಅಧ್ಯಕ್ಷ ನ್ಯಾಯಮೂತಿ ಎ.ಕೆ. ಗೋಯೆಲ್ ನೇತೃತ್ವದ ಪೀಠವು ಸರ್ಕಾರಕ್ಕೆ ದಂಡ ವಿಧಿಸಿದೆ. ಅಲ್ಲದೆ ಮಾಲಿನ್ಯ ಮುಕ್ತ ವಾತಾವರಣವನ್ನು ರಾಜ್ಯದ ಜನರಿಗೆ ಒದಗಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದೆ.
ನಗರ ಪ್ರದೇಶಗಳಲ್ಲಿ ಪ್ರತಿದಿನ 2,758 ಮಿಲಿಯನ್ ಲೀಟರ್ ಕೊಳಚೆ ಉತ್ಪಾದನೆಯಾಗುತ್ತಿದೆ. ಇದರಲ್ಲಿ 1,505 ಮಿಲಿಯನ್ ಲೀಟರ್ನಷ್ಟು ಕೊಳಚೆ ಸಂಸ್ಕರಿಸುವ ಸಾಮರ್ಥ್ಯವಿದ್ದರೂ, ಕೇವಲ 1,268 ಲೀಟರ್ ನಷ್ಟು ತ್ಯಾಜ್ಯವನ್ನು ಮಾತ್ರ ಸಂಸ್ಕರಣೆ ಮಾಡಲಾಗುತ್ತಿದೆ. ಉಳಿದ 1,490 ಮಿಲಿಯನ್ ಲೀಟರ್ನಷ್ಟು ತ್ಯಾಜ್ಯ ಸಂಸ್ಕರಣೆಯಾಗದೇ ಉಳಿಯುತ್ತಿದೆ. ಇದರಿಂದ ಪರಿಸರಕ್ಕೆ ವ್ಯಾಪಕ ಹಾನಿಯಾಗುತ್ತದೆ ಎಂದು ಎನ್ಜಿಟಿ ಅಭಿಪ್ರಾಯಪಟ್ಟಿದೆ.