ಬೆಂಗಳೂರು, ಸೆ 04 (DaijiworldNews/DB): ಹಿಜಾಬ್ ವಿವಾದದಿಂದ ಮುಸ್ಲಿಂ ಸಮುದಾಯವನ್ನು ರಾಜ್ಯದಲ್ಲಿ ಅವಗಣನೆ ಮಾಡಲಾಗುತ್ತಿದೆ. ಹಿಂದೂ ಕಾರ್ಯಕರ್ತರ ಕೊಲೆಯ ಮುಖಾಂತರ ಭಯ ಹುಟ್ಟಿಸುವುದರೊಂದಿಗೆ ಕೋಮು ಗಲಭೆ ಸೃಷ್ಟಿಸಬೇಕು ಎಂಬ ದುರುದ್ದೇಶದಿಂದ ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ನಡೆದಿದೆ ಎಂದು ರಾಷ್ಟ್ರೀಯ ತನಿಖಾ ದಳವು ಆರೋಪ ಪಟ್ಟಿ ಸಲ್ಲಿಕೆ ಮಾಡಿದೆ.
ಹರ್ಷ ಕೊಲೆ ಪ್ರಕರಣದ ತನಿಖೆ ಸಂಬಂಧಿಸಿ 750ಕ್ಕೂ ಹೆಚ್ಚು ಪುಟಗಳ ಆರೋಪ ಪಟ್ಟಿಯನ್ನು ಎನ್ಐಎ ಅಧಿಕಾರಿಗಳು ಶನಿವಾರ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಈ ಕೊಲೆಯ ಮುಖಾಂತರ ರಾಜ್ಯದಲ್ಲಿ ಭಯ ಸೃಷ್ಟಿಸುವುದು ಮತ್ತು ಆ ಮೂಲಕ ತಮ್ಮ ಸಮುದಾಯದ ಸಾಮರ್ಥ್ಯವನ್ನು ತೋರಿಸಬೇಕೆಂಬುದು ದುಷ್ಕರ್ಮಿಗಳ ಉದ್ದೇಶವಾಗಿತ್ತು. ಕೋಮು ಗಲಭೆ ಸೃಷ್ಟಿಸುವುದರೊಂದಿಗೆ ಹಳೆ ದ್ವೇಷವೂ ಈ ಕೊಲೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಮುಸ್ಲಿಂ ಸಮುದಾಯವಿರುವ ಪ್ರದೇಶದಲ್ಲಿ ಹಿಂದೂ ಕಾರ್ಯಕ್ರಮ ಸಂಘಟಿಸುತ್ತಿದ್ದದಕ್ಕೆ ಸಹಿಸಲಾರದೆ ಆರೋಪಿಗಳಾದ ಖಾಸಿಫ್ ಮತ್ತು ರಿಯಾನ್ ಒಂದೆರಡು ಸಲ ಹರ್ಷನ ಮೇಲೆ ದಾಳಿ ನಡೆಸಿದ್ದರು. ಅಲ್ಲದೆ, ಆರೋಪಿಗಳಾದ ಮೊಹಮ್ಮದ್ ಖಾಸಿಫ್, ರಿಯಾನ್ ಶರೀಫ್ ಮತ್ತು ಆಸಿಫ್ ಉಲ್ಲಾಖಾನ್ ಅಲಿಯಾಸ್ ಚಿಕ್ಕು ಹಾಗೂ ಹರ್ಷ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳಗಳು ನಡೆಯುತ್ತಿದ್ದವು. ಶಿವಮೊಗ್ಗದ ಜೈಲಿನಲ್ಲಿಯೂ ಇತ್ತಂಡಗಳ ನಡುವೆ ಗಲಾಟೆಯಾಗಿತ್ತು. ಹೀಗಾಗಿಯೇ ರಿಯಾನ್, ಖಾಸಿಫ್ ಸೇರಿ ಕೊಲೆಗೆ ಸಂಚು ರೂಪಿಸಿ ಆತನನ್ನು ಫೆಬ್ರವರಿ 20ರಂದು ಹತ್ಯೆ ಮಾಡಿದ್ದರು. ಹರ್ಷನ ಚಲನವಲನ ನೋಡಿಕೊಳ್ಳಲೆಂದೇ ಎಂಟು ಮಂದಿ ಸಹಚರರನ್ನು ನಿಯೋಜಿಸಿದ್ದರು ಎಂದೂ ಆರೋಪಿಗಳು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಇದಕ್ಕೂ ಮುನ್ನ ರಿಯಾನ್ ಜೀವ ಬೆದರಿಕೆಯನ್ನೂ ಹಾಕಿದ್ದ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಆರೋಪಿಗಳ ವಿರುದ್ದ ಕೋಮು ಸೌಹಾರ್ದ ಕೆಡಿಸುವ ಹುನ್ನಾರ ಎಂಬ ಆರೋಪದ ವಿರುದ್ದ ಪ್ರಕರಣ ದಾಖಲಾಗಿತ್ತು. ಬಳಿಕ ಎನ್ಐಎಗೆ ತನಿಖೆಯ ಹೊಣೆಯನ್ನು ವರ್ಗಾಯಿಸಲಾಗಿತ್ತು. ಇದೀಗ ತನಿಖೆ ಪೂರ್ಣಗೊಳಿಸಿರುವ ಎನ್ಐಎ ಆರೋಪಿಗಳ ಹೇಳಿಕೆ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಸೇರಿಸಿ ಚಾರ್ಜ್ಶೀಟ್ನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.