ವಿಜಯಪುರ, ಸೆ 04 (DaijiworldNews/DB): ಹೆಚ್ಚಿನ ಸಂಖ್ಯೆಯ ಭಕ್ತರಿಂದ ತುಂಬಿದ್ದ ಗಣೇಶ ಮಂಟಪ ಭಾರ ತಡೆಯಲಾರದೆ ಕುಸಿದು ಬಿದ್ದ ಘಟನೆ ವಿಜಯಪುರದ ಸಿಂದಗಿ ಪಟ್ಟಣದಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಗೋಪುರದೊಂದಿಗೆ ಸ್ವರ್ಣ ವರ್ಣದ ದೇವಾಲಯ ಮಾದರಿಯಲ್ಲಿ ಗಣೇಶೋತ್ಸವ ಮಂಟಪವನ್ನು ತಯಾರಿಸಲಾಗಿತ್ತು. ಹೀಗಾಗಿ ಈ ಮಂಟಪ ಜನಾಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಬಂಗಾರದ ಬಣ್ಣದ ದೇವಾಲಯ ಮಾದರಿಯಲ್ಲಿದ್ದ ಮಂಟಪ ವೀಕ್ಷಿಸಲು ಮತ್ತು ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಹಲವಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಮಂಟಪದ ಮೇಲೆ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಭಾರ ತಾಳಲಾರದೆ ಮಂಟಪ ಕುಸಿದು ಬಿದ್ದಿದೆ.
ಘಟನೆಯಲ್ಲಿ ಕೆಲವರು ಮಂಟಪದಡಿಯಲ್ಲಿ ಸಿಲುಕಿದರು. ಮಹಿಳೆಯರು, ಮಕ್ಕಳು ಸೇರಿದಂತೆ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕಾಗಮಿಸಿ ಮಂಟಪದ ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸಿದರು.