ಪಾಲ್ಘರ್, ಸೆ 03 (DaijiworldNews/DB): ರಸ್ತೆ ಬದಿಯ ಪೊದೆಯಲ್ಲಿ ಎಸೆದಿದ್ದ ಶೂಟ್ಕೇಸ್ನಲ್ಲಿ ಹದಿಹರೆಯದ ಬಾಲಕಿಯ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಶವ ಪತ್ತೆಯಾದ ಒಂದು ವಾರದ ಬಳಿಕ ಆರೋಪಿಗಳನ್ನು ಗುಜರಾತ್ನ ಪಾಲನ್ಪುರದಿಂದ ಬಂಧಿಸಲಾಗಿದೆ. ಕೊಲೆಯ ಹಿಂದಿನ ಉದ್ದೇಶವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಶಾಲೆಗೆ ತೆರಳಿದ್ದ ಮುಂಬೈ ಅಂಧೇರಿಯ 14 ವರ್ಷದ ಬಾಲಕಿ ಬಳಿಕ ನಾಪತ್ತೆಯಾಗಿದ್ದಳು. ಹೀಗಾಗಿ ಮುಂಬೈ ಪೊಲೀಸರು ನಾಪತ್ತೆ ದೂರು ದಾಖಲಿಸಿದ್ದರು. ಬಳಿಕ ಆಗಸ್ಟ್ 26 ರಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಲಿವ್ ಪ್ರದೇಶದಲ್ಲಿ ನೈಗಾಂಬ್ ಬಳಿ ರಸ್ತೆ ಬದಿಯ ಪೊದೆಯಲ್ಲಿ ಈ ಬಾಲಕಿಯ ಶವ ಸೂಟ್ಕೇಸ್ನಲ್ಲಿ ಪತ್ತೆಯಾಗಿತ್ತು. ಈ ಸೂಟ್ಕೇಸ್ನ್ನು ಆರೋಪಿಗಳು ಪೊದೆಗೆ ಎಸೆದು ಹೋಗಿದ್ದರು. ಶವದಲ್ಲಿ ಇರಿತದ ಗಾಯಗಳು ಕಂಡು ಬಂದಿತ್ತು. ಈ ನಿಟ್ಟಿನಲ್ಲಿ ಆರೋಪಿಗಳ ಜಾಡು ಹಿಡಿದು ಹೊರಟ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.