ಬೆಂಗಳೂರು, ಸೆ 03 (DaijiworldNews/DB): ಅಹವಾಲು ಹೇಳಿಕೊಳ್ಳಲು ಬಂದ ರೂತ್ ಸಗಾಯ್ ಮೇರಿ ಎಂಬಾಕೆಯನ್ನು ನಿಂದಿಸಿದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಶಾಸಕ ಅರವಿಂದ ಲಿಂಬಾವಳಿ ತಾವು ಮಹಿಳೆಯೊಂದಿಗೆ ಕ್ಷಮೆ ಕೇಳಲು ಸಿದ್ಧ ಎಂದಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಈ ಬಗ್ಗೆ ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ. ಆದರೆ ನಿಮ್ಮ ಪಕ್ಷದ ಇದೇ ಕಾರ್ಯಕರ್ತೆ ರೂತ್ ಸಗಾಯ್ ಮೇರಿ ಎಷ್ಟೋ ವರ್ಷಗಳಿಂದ ರಾಜಕಾಲುವೆ ಒತ್ತುವರಿ ಮಾಡಿ, ಜನರಿಗೆ ಸಮಸ್ಯೆಯುಂಟು ಮಾಡಿದ್ದಾರಲ್ಲ, ಅದನ್ನು ಖಾಲಿ ಮಾಡಲು ಹೇಳಿ. ನಿಮ್ಮ ಕಾರ್ಯಕರ್ತೆಯ ಮೊಂಡುತನವನ್ನು ಇಲ್ಲಿಗೇ ನಿಲ್ಲಿಸಲು ಹೇಳಿ' ಎಂದಿದ್ದಾರೆ.
ಶಾಸಕ ಅರವಿಂದ ಲಿಂಬಾವಳಿ ಅವರು ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯನ್ನು ನಿಂದಿಸಿದ್ದಲ್ಲದೆ, ಒದ್ದು ಒಳಗೆ ಹಾಕಿ ಎಂದು ದರ್ಪ ತೋರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಇಂದು ಬೆಳಗ್ಗೆ ವೈರಲ್ ಆಗಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಸೇರಿದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕಾಂಗ್ರೆಸ್ ಪಕ್ಷವು ಸರಣಿ ಟ್ವೀಟ್ ಮಾಡಿ ಲಿಂಬಾವಳಿ ಅವರ ನಡೆಯನ್ನು ಖಂಡಿಸಿತ್ತು. ಈ ಎಲ್ಲಾ ಆಕ್ರೋಶಗಳ ಬೆನ್ನಲ್ಲೇ ಇದೀಗ ಲಿಂಬಾವಳಿ ಅವರು ಟ್ವೀಟ್ ಮಾಡಿದ್ದಾರೆ.