ದಾವಣಗೆರೆ, ಸೆ 03 (DaijiworldNews/DB): ಮಂಗಳೂರಿನಲ್ಲಿ ನಡೆದ ಮೋದಿ ಕಾರ್ಯಕ್ರಮಕ್ಕೆ ಬಂದವರು ಪೇಮೆಂಟ್ ಗಿರಾಕಿಗಳಲ್ಲ. ಹಣ, ಹೆಂಡದಾಸೆಯಿಂದ ಬಂದಿಲ್ಲ. ಉತ್ಸಾಹದಿಂದ ಕಾರ್ಯಕ್ರಮ ವೀಕ್ಷಿಸಲು ಎಲ್ಲರೂ ಆಗಮಿಸಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ಬಿಜೆಪಿ ಚುನಾವಣೆಗಾಗಿ ಕೆಲಸ ಮಾಡುವುದಿಲ್ಲ. ಮೋದಿಯವರು ಕೇವಲ ಕರ್ನಾಟಕ ಮಾತ್ರವಲ್ಲ, ವಿವಿಧ ರಾಜ್ಯಗಳಿಗೂ ಹೋಗುತ್ತಾರೆ. ಕೇರಳ, ತಮಿಳುನಾಡಿನಲ್ಲಿ ಚುನಾವಣೆ ಇಲ್ಲದಿದ್ದರೂ ಮೋದಿಯವರು ಅಲ್ಲಿಗೆ ಪ್ರವಾಸ ಮಾಡಿದ್ದಾರೆ. ದೇಶಕ್ಕೇ ಶಕ್ತಿ ಬರಬೇಕೆಂಬ ಅಪೇಕ್ಷೆಯೊಂದಿಗೆ ಬಿಜೆಪಿ ಕೆಲಸ ಮಾಡುತ್ತಿದೆ ಎಂದವರು ತಿಳಿಸಿದರು.
ಮೂರು ವರ್ಷಗಳಾದ ಕೂಡಲೇ ರಾಜ್ಯಾಧ್ಯಕ್ಷರನ್ನು ಬದಲಾಯಿಸಲೇಬೇಕೆಂದಿಲ್ಲ. ಅಂತಹ ಯಾವುದೇ ಚರ್ಚೆಗಳು ಆಗಿಲ್ಲ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.
ಎಲ್ಲಾ ಕಾಲದಲ್ಲಿಯೂ ರಾಜಕೀಯ ಧ್ರುವೀಕರಣ ನಡೆದುಕೊಂಡು ಬಂದಿದೆ. ಬಿಜೆಪಿಗೆ ಬಂದವರು ಭವಿಷ್ಯದಲ್ಲಿ ಭದ್ರವಾಗಿದ್ದಾರೆ. ಆದರೆ ಪಕ್ಷ ತ್ಯಜಿಸಿ ಹೋದವರು ರಾಜಕೀಯವಾಗಿ ಅತಂತ್ರರಾಗಿದ್ದಾರೆ ಎಂದರು.
ನಾಯಕರನ್ನೇ ಒಳಗೊಳ್ಳುವಿಕೆಯಲ್ಲಿ ಕಾಂಗ್ರೆಸ್ನವರು ಯಶಸ್ಸು ಕಂಡಿಲ್ಲ. ಆ ಪಕ್ಷದ ಹಿರಿಯರುಗಳೇ ಪಕ್ಷ ಬಿಟ್ಟು ಹೊರ ಬರುತ್ತಿದ್ದಾರೆ ಎಂದವರು ವ್ಯಂಗ್ಯವಾಡಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲಿದೆ. ಈ ಬಗ್ಗೆ ಎಲ್ಲಾ ಸಮೀಕ್ಷೆಗಳು ನಮ್ಮ ಬಳಿಯೂ ಇವೆ. ಕಾಂಗ್ರೆಸ್ ಸತ್ಯಕ್ಕೆ ದೂರವಾದ ಮಾತುಗಳನ್ನೇ ಹೇಳುತ್ತಿದೆಯೇ ಹೊರತು ಅವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಪ್ರಧಾನಿ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಎರಡು ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿಲ್ಲವೇ? 2018ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ನಾನೇ ಸಿಎಂ ಎಂದಿದ್ದರು. ಆದರೆ ಸಾಧ್ಯವಾಯಿತಾ ಎಂದು ಪ್ರಶ್ನಿಸಿದರು.