ಬೆಂಗಳೂರು, ಸೆ 03 (DaijiworldNews/DB): 'ಬೇಟಿ ಬಚಾವ್' ಆಗಬೇಕಿರುವುದು ಬಿಜೆಪಿಯ ಗೂಂಡಾಗಳಿಂದ!. ಮನುಶಾಸ್ತ್ರವನ್ನು ನಂಬುವ ಬಿಜೆಪಿಗೆ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಎಸಗುವುದು ಪರಂಪರೆಯಿಂದ ಬಂದ ಗುಣ ಎಂದು ಕಾಂಗ್ರೆಸ್ ಆರೋಪಿಸಿದೆ.
ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯನ್ನು ನಿಂದಿಸಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಮಹಿಳೆಯನ್ನು ನಿಂದಿಸಿ, ದೌರ್ಜನ್ಯವೆಸಗಿದ ಅರವಿಂದ್ ಲಿಂಬಾವಳಿ ವಿರುದ್ಧ ಯಾವ ಕ್ರಮ ಕೈಗೊಳ್ಳುವಿರಿ ಬಸವರಾಜ ಬೊಮ್ಮಾಯಿ ಅವರೇ? ಈ ದೌರ್ಜನ್ಯಕ್ಕೆ ನಿಮ್ಮ ಬೆಂಬಲವೂ ಇದೆಯೇ? ಎಂದು ಪ್ರಶ್ನಿಸಿದೆ.
ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಅರವಿಂದ್ ಲಿಂಬಾವಳಿಯ ವರ್ತನೆಯು ಬಿಜೆಪಿಯ ಜನವಿರೋಧಿ ಧೋರಣೆ, ದುರಹಂಕಾರ ಪರಮಾವಧಿಗೆ ತಲುಪಿರುವುದಕ್ಕೆ ಸಾಕ್ಷಿ. ಜನತೆಯ ಮೇಲೆ ದರ್ಪ ತೋರಿದ ಮಾತ್ರಕ್ಕೆ ನಿಮ್ಮ ಅಯೋಗ್ಯತನ ಮರೆಯಾಗುವುದಿಲ್ಲ ಬಿಜೆಪಿಯವೇ, ನಿಮ್ಮ ಶಾಸಕರ ಈ ವರ್ತನೆ ನಿಮಗೆ ಸಹ್ಯವೇ? ಎಂದೂ ಕಾಂಗ್ರೆಸ್ ಸಿಎಂ ಬೊಮ್ಮಾಯಿಯವರನ್ನು ಪ್ರಶ್ನಿಸಿದೆ.
ಮಹಿಳೆಗೆ ನಿಂದಿಸಿದ್ದರು ಮಾಧುಸ್ವಾಮಿ, ಮಹಿಳೆ ಮೇಲೆ ಹಲ್ಲೆ ಮಾಡಿದ್ದರು ಸಿದ್ದು ಸವದಿ, ಉದ್ಯೋಗ ಕೇಳಿದಾಕೆಯನ್ನು ಮಂಚ ಹತ್ತಿಸಿದ್ದರು ರಮೇಶ್ ಜಾರಕಿಹೊಳಿ, ಅತ್ಯಾಚಾರ ಸಂತ್ರಸ್ತೆಯದ್ದೇ ತಪ್ಪು ಎಂದಿದ್ದರು ಅರಗ ಜ್ಞಾನೇಂದ್ರ, ಮಹಿಳೆಯ ಮೇಲೆ ದರ್ಪ ಮೆರೆದರು ಅರವಿಂದ್ ಲಿಂಬಾವಳಿ. ಇದೇನಾ ಬಿಜೆಪಿಯ ಸ್ತ್ರೀಗೌರವದ ಸಂಸ್ಕೃತಿ? ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿಯ ಸ್ತ್ರೀಪರ ಕಾಳಜಿಯ ವೀರಾಧಿವೀರರೇ, ಸಿಡಿ ಶೂರರೇ, ಕೋರ್ಟಿನಿಂದ ತಡೆಯಾಜ್ಞೆ ತಂದ ಧೀರರೇ.. ನಿಮ್ಮ ಪಕ್ಷದ ಅರವಿಂದ್ ಲಿಂಬಾವಳಿಯ ಮಹಿಳೆ ಮೇಲಿನ ದೌರ್ಜನ್ಯಕ್ಕೆ ರೊಚ್ಚಿಗೇಳುವುದು ಯಾವಾಗ? ಸ್ತ್ರೀ ಕುಲದ ಗೌರವವನ್ನು ಎತ್ತಿ ಹಿಡಿಯುವುದು ಯಾವಾಗ? ನಳಿನ್ ಕುಮಾರ್ ಕಟೀಲ್ ಅವರೇ, ಲಿಂಬಾವಳಿಯವರನ್ನು ಉಚ್ಛಾಟಿಸುವುದು ಯಾವಾಗ? ಎಂದು ಪ್ರಶ್ನೆ ಎಸೆದಿದೆ.
ಮಹಿಳೆಯ ಮೇಲೆ ದಬ್ಬಾಳಿಕೆ ಎಸಗಿದ್ದಲ್ಲದೆ "ನಾನೇನು ರೇಪ್ ಮಾಡಿದ್ನಾ" ಎಂದು ಉದ್ಧಟತನದಲ್ಲಿ ಕೇಳಿದ ಅರವಿಂದ್ ಲಿಂಬಾವಳಿ ಅವರ ಮಾತುಗಳು ಇಡೀ ಬಿಜೆಪಿ ಸಂಸ್ಕೃತಿಗೆ ಹಿಡಿದ ಕನ್ನಡಿ. ಇಂತಹ ಕೊಳಕು ಮನಸ್ಥಿತಿಯ ಶಾಸಕನ ವಿರುದ್ಧ ಕ್ರಮ ಕೈಗೊಳ್ಳದೆ ಸಿಎಂ ಮೌನವಹಿಸಿರುವುದು ಏಕೆ?. ತನ್ನದೇ ಮತಕ್ಷೇತ್ರದ ಮಹಿಳೆ ಮೇಲೆ ದೌರ್ಜನ್ಯ ಎಸಗಿದರೂ ಶಾಸಕ ಅರವಿಂದ್ ಲಿಂಬಾವಳಿ ವಿರುದ್ಧ ಕ್ರಮ ಜರುಗಿಸದೆ ನಾಲಿಗೆ ಉದ್ಧವಾಗಲು ಬಿಟ್ಟ ಮುಖ್ಯಮಂತ್ರಿಯವರು ಮಂಡಿಯೂರಿ ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು. ಬಿಜೆಪಿಗೆ ನಿಜಕ್ಕೂ ಮಹಿಳೆಯರ ಮೇಲೆ ಗೌರವ ಇದ್ದರೆ ಲಿಂಬಾವಳಿಯನ್ನು ವಜಾಗೊಳಿಸಿ ನಿರೂಪಿಸಲಿ ಎಂದು ಸವಾಲು ಎಸೆದಿದೆ.
ಬಿಜೆಪಿಯು ರೇಪ್ ಆರೋಪಿ ರಮೇಶ್ ಜಾರಕಿಹೊಳಿಯನ್ನೇ ಸಮರ್ಥಿಸಿಕೊಂಡಿದೆ. ಮೈಸೂರಿನ ರೇಪ್ ಸಂತ್ರಸ್ತೆಯನ್ನು ದೂಷಿಸಿದೆ. ಗುಜರಾತಿನಲ್ಲಿ ರೇಪಿಸ್ಟರನ್ನು ಸನ್ಮಾನಿಸಿದೆ. ಕಾಶ್ಮೀರದಲ್ಲಿ ರೇಪ್ ಆರೋಪಿಗಳ ಮೆರವಣಿಗೆಯನ್ನೇ ಮಾಡಿದೆ. ಇಂತಹ ಮಹಿಳಾ ವಿರೋಧಿ ಬಿಜೆಪಿಗೆ ಲಿಂಬಾವಳಿ ಮಾತು ಪ್ರಿಯವಾಗಬಹುದು, ಆದರೆ ರಾಜ್ಯದ ಮಹಿಳೆಯರಿಗೆ ಅದು ಅಸಹ್ಯ ಎಂದು ಕಾಂಗ್ರೆಸ್ ಕಿಡಿ ಕಾರಿದೆ.