ಮಧ್ಯಪ್ರದೇಶ, ಸೆ 03 (DaijiworldNews/DB): ಸಿನೆಮಾದಿಂದ ದುಷ್ಪ್ರೇರಣೆ ಪಡೆದು ದರೋಡೆಕಾರನಾಗಿ ಪ್ರಸಿದ್ದಿ ಪಡೆಯಬೇಕೆಂಬ ಯುವಕನ ಹುಚ್ಚುತನಕ್ಕೆ ನಾಲ್ವರು ಸೆಕ್ಯುರಿಟಿ ಸಿಬಂದಿಗಳು ಬಲಿಯಾಗಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಗರದ ಕೇಸರಿ ಪ್ರದೇಶದ ನಿವಾಸಿ ಶಿವಪ್ರಸಾದ್ ಧ್ರುವೆ (19) ಬಂಧಿತ ಆರೋಪಿ. ದ ಸಾಗರ್ ಪಟ್ಟಣದಲ್ಲಿ ಮೂವರು ಸೆಕ್ಯುರಿಟಿ ಸಿಬಂದಿಗಳನ್ನು ಕೊಲೆಗೈಯಲಾಗಿತ್ತು. ಪ್ರಕರಣ ಸಂಬಂಧಿಸಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿ ಶಿವಪ್ರಸಾದ್ನನ್ನು ಪೊಲೀಸರು ಬಂಧಿಸಿದರು. ಆತನನ್ನು ಭೋಪಾಲ್ನಿಂದ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಕಳೆದ ಐದು ದಿನಗಳಲ್ಲಿ ನಾಲ್ವರು ಸೆಕ್ಯುರಿಟಿ ಸಿಬಂದಿಗಳನ್ನು ಹತ್ಯೆಗೈದಿರುವುದಾಗಿ ಬಾಯ್ಬಿಟ್ಟಿದ್ದಾನೆ ಎಂದು ಸಾಗರ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಅನುರಾಗ್ ತಿಳಿಸಿದ್ದಾರೆ.
ಈತ ಸಿನೆಮಾವೊಂದರ ನಾಯಕನ ಪಾತ್ರದಿಂದ ದುಷ್ಪ್ರೇರಣೆ ಪಡೆದು ಹಣ ಸಂಗ್ರಹಿಸುವುದು ಮತ್ತು ದರೋಡೆ ಮೂಲಕ ಪ್ರಸಿದ್ದಿ ಹೊಂದುವ ಉದ್ದೇಶ ಹೊಂದಿದ್ದ. ಅಲ್ಲದೆ ಪೊಲೀಸರನ್ನೂ ಟಾರ್ಗೆಟ್ ಮಾಡಲು ಯೋಜಿಸಿದ್ದ ಎಂಬುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ. ಮೇ ತಿಂಗಳಲ್ಲಿ ನಡೆದ ವಾಚ್ಮನ್ ಒಬ್ಬರ ಕೊಲೆ ಪ್ರಕರಣದಲ್ಲಿ ಈತನ ಕೈವಾಡದ ಬಗ್ಗೆಯೂ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ರಾತ್ರಿ ವೇಳೆ ನಿದ್ರಿಸುತ್ತಿದ್ದ ಭದ್ರತಾ ಸಿಬಂದಿಯನ್ನು ಹೊಂಚು ಹಾಕಿ ಕೊಲೆ ಮಾಡುತ್ತಿದ್ದ. ನಿದ್ರಿಸುತ್ತಿದ್ದವರನ್ನೇ ಯಾಕೆ ಗುರಿಯಾಗಿಸಿಕೊಂಡಿದ್ದ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.