ಬೆಂಗಳೂರು, ಸೆ 03 (DaijiworldNews/DB): ಡ್ರಾಪ್ ಕೊಡುವ ನೆಪದಲ್ಲಿ ಇಬ್ಬರು ಯುವಕರು ಯುವತಿಯೋರ್ವಳನ್ನು ಬೈಕ್ನಲ್ಲಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಮೂಲದ ಅಖೀಲೇಶ್ (25), ಹಾಸನ ಮೂಲದ ದೀಪು (21) ಬಂಧಿತರು. ಆ.31ರಂದು ಸಂಜೆ 5 ಗಂಟೆಗೆ 25 ವರ್ಷದ ಯುವತಿ ಈಜಿಪುರ ಬಳಿಯಿರುವ ನಿವೇಶನ ನೋಡಿ ಆ ಬಳಿಕ ಹಿಂತಿರುಗುತ್ತಿದ್ದಳು. ಯುವತಿಯನ್ನು ಹಿಂಬಾಲಿಸಿಕೊಂಡು ಬಂದ ಇಬ್ಬರು ಯುವಕರು ನೀವು ನಮ್ಮ ಏರಿಯಾದವರಲ್ಲವೇ, ಡ್ರಾಪ್ ಕೊಡುತ್ತೇವೆ ಎಂದು ಬಲವಂತ ಮಾಡಿದ್ದರು. ಇಬ್ಬರ ಪರಿಚಯವಿದ್ದ ಕಾರಣ ಯುವತಿ ಅವರೊಂದಿಗೆ ಬೈಕ್ ಹತ್ತಿದ್ದಳು. ಬಳಿಕ ಆಕೆಯನ್ನು ಹುಸ್ಕೂರಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಊಟ ಮಾಡಿಸಿ ಬಲವಂತವಾಗಿ ಮದ್ಯ ಕುಡಿಸಿದ್ದರು. ಆನಂತರ ಇಬ್ಬರೂ ಆಕೆಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಸಂತ್ರಸ್ತೆ ಆತಂಕದಿಂದ ಬೆಳಗಾಗುವವರೆಗೂ ಪೊದೆಯೊಂದರಲ್ಲಿ ಅವಿತು ಕುಳಿತಿದ್ದಳು. ಬೆಳಗಾದ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.