ಚೆನ್ನೈ, ಸೆ 03 (DaijiworldNews/DB): ಬಾಂಗ್ಲಾದೇಶದ ಯುವತಿಯನ್ನು ತಮಿಳುನಾಡಿನ ಮಹಿಳೆಯೊಬ್ಬರು ಸಾಂಪ್ರದಾಯಿಕ ರೀತಿಯಲ್ಲೇ ವಿವಾಹವಾಗಿದ್ದಾರೆ. ಹಾರ ಬದಲಾಯಿಸಿಕೊಂಡು, ಸಪ್ತಪದಿ ತಿಳಿಯುವ ಮೂಲಕ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ತಮಿಳುನಾಡಿನ ಸುಭಿಕ್ಷಾ ಸುಬ್ರಹ್ಮಣಿ ಅವರು ತಮಿಳುನಾಡು ಬ್ರಾಹ್ಮಣ ಶೈಲಿಯ ಸಂಪ್ರದಾಯದಂತೆ ತನ್ನ ತಂದೆಯ ಮೇಲೆ ಕುಳಿತುಕೊಂಡು ಆಕೆಯ ಜೀವನ ಸಂಗಾತಿ ಬಾಂಗ್ಲಾದೇಶದ ಟೀನಾ ದಾಸ್ ಅವರೊಂದಿಗೆ ಹಾರ ಬದಲಾಯಿಸಿಕೊಂಡರು. ಚೆನ್ನೈನಲ್ಲಿ ನಡೆದ ಸಾಂಪ್ರದಾಯಿಕ ಮದುವೆಯಲ್ಲಿ ಪತ್ನಿ-ಪತ್ನಿಯರಾಗಿ ಕೈ ಹಿಡಿದು ಸಪ್ತಪದಿ ತುಳಿದರು.
ತಮಿಳು ಬ್ರಾಹ್ಮಣ ಹೆತ್ತವರ ಮಗಳಾದ ಸುಭಿಕ್ಷಾ ಲೆಕ್ಕಪರಿಶೋಧಕಿಯಾಗಿ ಕೆನಡಾದ ಕೆಲ್ಗೇರಿಯಲ್ಲಿ ವಾಸಿಸುತ್ತಿದ್ದು, ಆಕೆಯ ಪತ್ನಿ ಟೀನಾ ದಾಸ್ ಕೂಡಾ ಕೆಲ್ಗೇರಿಯಲ್ಲೇ ವಾಸಿಸುತ್ತಿದ್ದಾರೆ. ಟೀನಾ ಸಂಪ್ರದಾಯವಾದಿ ಹಿಂದೂ ಕುಟುಂಬದ ಮಗಳು.
ಆರು ವರ್ಷಗಳ ಪರಿಚಯದ ಬಳಿಕ ನಾವು ನಮ್ಮ ಪ್ರೀತಿಯ ಜೊತೆಗೂಡಿದ್ದೇವೆ. ಸಂಪ್ರದಾಯಬದ್ದವಾಗಿ ವಿವಾಹವಾಗಿದ್ದೇವೆ ಎಂದು ಈ ವೇಳೆ ಸುಭಿಕ್ಷಾ ಹೇಳಿದ್ದಾರೆ. ನಾನು ಮಧುರೈಯಲ್ಲಿ ಬೆಳೆದು ಬಳಿಕ ಕತಾರ್ನಲ್ಲಿ ವಾಸವಾಗಿದ್ದೆ. ಕೆನಡಾಕ್ಕೆ ತೆರಳಿದ ಬಳಿಕವೇ ಈ ವಿಲಕ್ಷಣ ಸಮುದಾಯದ ಬಗ್ಗೆ ನನಗೆ ತಿಳಿಯಿತು ಎಂದು ಕೆಲ್ಗೇರಿಯಲ್ಲಿ ಪ್ಲೇ ಸ್ಕೂಲ್ ನಡೆಸುತ್ತಿರುವ ಸುಭಿಕ್ಷಾಳ ತಾಯಿ ಪೂರ್ಣಪುಷ್ಕಲ ಸುಬ್ರಹ್ಮಣಿ ಹೇಳುತ್ತಾರೆ. ಮಗಳು ಈ ರೀತಿ ವಿವಾಹವಾಗುವುದರಿಂದಾಗಿ ನಮ್ಮ ದೊಡ್ಡ ಕುಟುಂಬವು ನಮ್ಮನ್ನು ಕುಟುಂಬದಿಂದ ಬೇರ್ಪಡಿಸಬಹುದೆಂಬ ಭಯ ಕಾಡಿತ್ತು. ಎರಡನೆಯದಾಗಿ ಸುಭಿಕ್ಷಾ ಸಮಾಜದಲ್ಲಿ ಹೇಗೆ ಬದುಕುತ್ತಾಳೆ ಮತ್ತು ತಾಯ್ತನದ ಅನುಭವ ಹೇಗೆ ಪಡೆಯುತ್ತಾಳೆ ಎಂಬ ಭಯವೂ ಕಾಡಿತ್ತು ಎಂಬುದಾಗಿ ಅವರು ಮನದಿಂಗಿತ ಹೇಳಿರುವುದಾಗಿ ವರದಿಯಾಗಿದೆ.
ಮಗಳ ನಿರ್ಧಾರದ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಅವರ ಆತಂಕದ ಬಗ್ಗೆ ಸುಭಿಕ್ಷಾಳೇ ಮರುಪ್ರಶ್ನೆ ಹಾಕುತ್ತಿದ್ದಳು. ಕೊನೆಗೆ ಹೆತ್ತವರು ಆಪ್ತ ಸಮಾಲೋಚನೆಯನ್ನೂ ತೆಗೆದುಕೊಂಡು ಜಗತ್ತಿನ ದೃಷ್ಟಿಕೋನಕ್ಕಿಂತ ಮಗಳ ಸಂತೋಷವೇ ಮುಖ್ಯ ಎಂಬ ತೀರ್ಮಾನಕ್ಕೆ ಬಂದಿದ್ದರು. ಟೀನಾ ನಾಲ್ಕು ವರ್ಷ ವ್ಯಕ್ತಿಯೋರ್ವನೊಂದಿಗೆ ಸಂಸಾರ ನಡೆಸಿದ್ದಳು. ಆದರೆ ಆಕೆ ತನ್ನನ್ನು ತಾನು ಸಲಿಂಗಕಾಮಿಯೆಂದು ತಿಳಿದುಕೊಂಡು ಆ ದಾಂಪತ್ಯ ಜೀವನದಿಂದ ಹೊರ ಬಂದಿದ್ದಳು ಎಂದು ಸುಭಿಕ್ಷಾ ತಾಯಿ ಹೇಳುತ್ತಾರೆ.
ಸುಭಿಕ್ಷಾ ಮತ್ತು ಟೀನಾ ಆಪ್ವೊಂದರಲ್ಲಿ ಆರು ವರ್ಷಗಳ ಹಿಂದೆ ಪರಸ್ಪರ ಪರಿಚಯವಾಗಿದ್ದರು. ಟೀನಾಳ ನಿರ್ಧಾರದಿಂದಾಗಿ ಮನೆಯವರು ಸಂಪರ್ಕವನ್ನೇ ಕಡಿತಗೊಳಿಸಿದ್ದರು. ಆದರೆ ಚೆನ್ನೈನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಸುಭೀಕ್ಷಾಳ 84 ವರ್ಷದ ಅಜ್ಜಿ ಕೂಡಾ ಭಾಗವಹಿಸಿದ್ದರು. ಅಲ್ಲದೆ, ಭಯವನ್ನು ನಿವಾರಿಸಿ, ಪ್ರೀತಿಯನ್ನು ಆರಿಸಿ ಎಂದೇ ಅಜ್ಜಿ ಹೇಳುತ್ತಿದ್ದರು ಎಂಬುದಾಗಿ ಅವರು ಸ್ಮರಿಸಿಕೊಂಡರು.