ಚಿಕ್ಕಮಗಳೂರು, ಸೆ 03 (DaijiworldNews/DB): ಹಚ್ಚ ಹಸಿರಿನಿಂದ ತುಂಬಿರುವ ಕಾಫಿ ನಾಡಿನ ಗಿರಿ-ಪರ್ವತ ಶ್ರೇಣಿಗಳಲ್ಲೆಲ್ಲಾ ಈಗ ನೀಲಿ ಚಿತ್ತಾರ. ಪರ್ವತ ಶ್ರೇಣಿ, ರಸ್ತೆ ಇಕ್ಕೆಲಗಳಲ್ಲಿ ಅರಳಲಾರಂಭಿಸಿರುವ ನೀಲಕುರುಂಜಿ ಹೂವುಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.
ಕಾಫಿ ನಾಡು ಎಂದೇ ಜನಜನಿತವಾಗಿರುವ ಚಿಕ್ಕಮಗಳೂರಿನಲ್ಲಿ ಎಲ್ಲಿ ದೃಷ್ಟಿ ಹರಿಸಿದರೂ ಬರೀ ಹಸಿರಿನ ಹೊದಿಕೆಯೇ ಕಣ್ಮುಂದೆ ಕಾಣುತ್ತದೆ. ಪರ್ವತಗಳ ನಾಡಿನಲ್ಲಿ ಪ್ರವಾಸ ಕೈಗೊಳ್ಳುವುದೊಂದು ಹಬ್ಬ. ಇಂತಹ ಹಸಿರಿನ ನಾಡಿನಲ್ಲಿ ಇದೀಗ ನೀಲಿ ಹೂವುಗಳದೇ ಚಿತ್ತಾರ. 12 ವರ್ಷಕ್ಕೊಮ್ಮೆ ಅರಳುವ ನೀಲಕುರುಂಜಿ ಹೂವುಗಳು ಕಾಫಿನಾಡಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಈಗಷ್ಟೇ ಅರಳಲು ಆರಂಭಿಸಿರುವ ನೀಲಕುರುಂಜಿ ಕಣ್ಮನ ತಣಿಸಲು ಸಿದ್ದವಾಗಿ ನಿಂತಿವೆ. ತಿಂಗಳ ಕಾಲ ಅರಳಿ ನಿಲ್ಲುವ ಈ ಹೂವುಗಳ ಸೌದರ್ಯವನ್ನು ಆಸ್ವಾದಿಸಬೇಕಾದರೆ ನೀವು ಕಾಫಿ ನಾಡಿಗೆ ಹೋಗಲೇಬೇಕು. ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಮುಳ್ಳಯ್ಯನಗಿರಿ, ಮಲ್ಲಂದೂರಿನ ಕಲ್ಲುಬಂಡೆಗುಡ್ಡ ಸುತ್ತಲೂ ಹೂವು ಅರಳಲಾರಂಭಿಸಿದೆ.
ಧಾರ್ಮಿಕ ಇತಿಹಾಸ
ಅಪರೂಪದ ನೀಲಕುರುಂಜಿ ಹೂವಿಗೆ ಧಾರ್ಮಿಕ ಇತಿಹಾಸವೂ ಇದೆ. ಇದನ್ನು ಪ್ರೇಮದ ಹೂವು ಎಂಬುದಾಗಿಯೂ ಕರೆಯುತ್ತಾರೆ. ಸುಬ್ರಹ್ಮಣ್ಯ ವಳ್ಳಿನ ಮದುವೆಯಾಗುವಾಗ ನೀಲಕುರುಂಜಿ ಹೂಮಾಲೆಯನ್ನು ಹಾಕಿದ್ದಕ್ಕಾಗಿ ಇದನ್ನು ಪ್ರೇಮದ ಹೂ ಎಂದೂ ಕರೆಯಲಾಗುತ್ತದೆ ಎನ್ನುತ್ತದೆ ಇತಿಹಾಸ. ಹೀಗಾಗಿ ಮೊದಲು ಈ ಹೂವನ್ನು ಸುಬ್ರಹ್ಮಣ್ಯನಿಗೆ ಅರ್ಪಿಸಲಾಗುತ್ತದೆ. ಗುರ್ಗಿ ಹೂವು ಎಂಬುದಾಗಿಯೂ ಈ ಹೂವನ್ನು ಕರೆಯಲಾಗುತ್ತದೆ. ಪ್ರಾಕೃತಿಕ ಸಮತೋಲನವಿದ್ದಾಗ ಮಾತ್ರ ನೀಲಕುರುಂಜಿ ಅರಳುತ್ತದೆ.
ಹೂವಿನಲ್ಲಿದೆ 46 ವಿಧ
ನೀಲಕುರುಂಜಿ ಹೂವಿನಲ್ಲಿ ಸುಮಾರು 46 ವಿಧಗಳನ್ನು ಭಾರತದಲ್ಲಿ ಗುರುತಿಸಲಾಗಿದೆ. ಇನ್ನು ವಿಶ್ವದಲ್ಲಿ 240 ವಿಧಗಳ ಹೂಗಳನ್ನು ಗುರುತಿಸಲಾಗಿದೆ. ಎಲ್ಲವೂ 12 ವರ್ಷಗಳಿಗೊಮ್ಮೆ ಅರಳುವ ಹೂವುಗಳಾಗಿರುವುದಿಲ್ಲ. 5, 7, 12, 14 ವರ್ಷಗಳಿಗೆ ಅರಳುವ ಪ್ರಭೇದ ಹೂವುಗಳೂ ಇವೆ. ಭಾರತದಲ್ಲಿ ದಕ್ಷಿಣ ಭಾರತದಲ್ಲಿ ಈ ಹೂವುಗಳು ಪ್ರಥಮವಾಗಿ ಕಂಡು ಬಂದವು. ಮುಖ್ಯವಾಗಿ ತಮಿಳುನಾಡು, ಕೇರಳ, ಕರ್ನಾಟಕದ ಪಶ್ಚಿಮ ಘಟ್ಟ ಸಾಲಿನಲ್ಲಿ ವ್ಯಾಪಕವಾಗಿ ಪತ್ತೆಯಾಗಿದ್ದವು. ಊಟಿ, ಮುನ್ನಾರ್ನಲ್ಲಿಯೂ ಇವು ಸಾಮಾನ್ಯವಾಗಿವೆ. ಹೂವು ಅರಳುವ ವೇಳೆ ಕಾಂಡದಲ್ಲಿ ಔಷಧಿಯ ಗುಣಗಳಿರುವುದರಿಂದ ವಿವಿಧ ಕಾಯಿಲೆಗಳಿಗೂ ಇದು ರಾಮಭಾಣ.