ಚಿಕ್ಕಮಗಳೂರು, ಸೆ 03 (DaijiworldNews/DB): ಚಿಕ್ಕಮಗಳೂರು ಜಿಲ್ಲಾ ರೆಸಾರ್ಟ್ ಮಾಲೀಕರ ಅಸೋಸಿಯೇಷನ್ನ ನೂತನ ಪದಾಧಿಕಾರಿಗಳು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ| ಕೆ. ಎನ್. ರಮೇಶ್ ಹಾಗೂ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರನ್ನು ಭೇಟಿಯಾದರು.
ಅಸೋಸಿಯೇಶನ್ ಅಧ್ಯಕ್ಷ, ಈಗಲ್ ಐ ರೆಸಾರ್ಟ್ನ ಜಿ. ಎಚ್. ಮೋನಿಸ್, ಕಾರ್ಯದರ್ಶಿ, ಕಾಫಿ ಗ್ರೂವ್ ರೆಸಾರ್ಟ್ನ ರಂಗರಾಜ್, ಉಪಾಧ್ಯಕ್ಷ, ಸಿರಿ ನೇಚರ್ ರೂಸ್ಟ್ ರೆಸಾರ್ಟ್ನ ರಮೇಶ್, ಕೋಶಾಧಿಕಾರಿ, ಟ್ರಿವಿಕ್ ಹೋಟೆಲ್ಸ್ ಮತ್ತು ರೆಸಾರ್ಟ್ನ ಕೆ. ಎಸ್. ರಾಜು, ಸದಸ್ಯರಾದ ಸಿಲ್ವರ್ ಸ್ಕೈ ರೆಸಾರ್ಟ್ನ ಚೇತನ್, ಬಿಂಡಿಗ ಪೀಕ್ ರೆಸಾರ್ಟ್ನ ಹೇಮಂತ್ ಕುಮಾರ್, ಗ್ಲೋಬಲ್ ವಿಲೇಜ್ ರೆಸಾರ್ಟ್ನ ಪರಮೇಶ್, ಜೇಡ್ ವಿಸ್ಟಾ ರೆಸಾರ್ಟ್ನ ಪವನ್, ದ ಬ್ಲೋಸಮ್ ರೆಸಾರ್ಟ್ನ ಮಂಜುನಾಥ್ ಉಪಸ್ಥಿತರಿದ್ದರು.
ಈ ವೇಳೆ ಅಧ್ಯಕ್ಷ ಜಿ. ಎಚ್. ಮೋನಿಸ್ ಮಾತನಾಡಿ, ಚಿಕ್ಕಮಗಳೂರು ಒಂದು ಸರ್ವ ಸಂಪನ್ನ ಪ್ರವಾಸಿ ತಾಣವಾಗಿದ್ದು, ಜಿಲ್ಲೆಯಲ್ಲಿ ಮೈ ತುಂಬಿ ಆಕರ್ಷಿಸುವ ಕುರುಂಜಿ ಹೂವುಗಳ ಮುಳ್ಳಯ್ಯನಗಿರಿಯ ಬೆಟ್ಟ ಶ್ರೇಣಿಗಳಿವೆ. ಭೋರ್ಗರೆವ ಜಲಪಾತಗಳು, ಸುಪ್ರಸಿದ್ಧ ಭದ್ರಾ ಹುಲಿ ಅಭಯಾರಣ್ಯವೂ ಈ ಜಿಲ್ಲೆಯಲ್ಲಿದೆ. ವಿಶ್ವ ಕೀರ್ತಿಯ ಶ್ರೀ ಶಂಕರಾಚಾರ್ಯರ ಮಠ, ಅಂತಾರಾಷ್ಟ್ರೀಯ ಮಟ್ಟದ ರೆಸಾರ್ಟ್ಗಳು ಅತ್ಯುತ್ತಮ ಪ್ರವಾಸಿತಾಣವಾಗಿ ಹೆಸರುವಾಸಿಯಾಗಿದೆ. ಜಿಲ್ಲೆಗೆ ಆಕರ್ಷಿಸುವ ಪ್ರವಾಸಿ, ಪರಿಸರ ಪ್ರೇಮಿ ಹಾಗೂ ಭಕ್ತಾದಿಗಳಿಗೆ ಬೇಕಾಗುವ ಎಲ್ಲಾ ಸವತ್ತುಗಳನ್ನು ನೀಡಿ ಜಿಲ್ಲೆಯ ಕೃಷಿಗೆ ಪರ್ಯಾಯ ಆರ್ಥಿಕ ಪುಷ್ಟಿ ಹಾಗೂ ಉದ್ಯೋಗಾವಕಾಶ ಕಲ್ಪಿಸಿ ಪ್ರವಾಸೋದ್ಯಮ ಏಳಿಗೆಯಲ್ಲಿ ರೆಸಾರ್ಟ್ಗಳು ಪ್ರಮುಖ ಪಾತ್ರವನ್ನು ವಹಿಸಿಕೊಂಡು ಬಂದಿರುತ್ತವೆ, ಇದನ್ನೇ ಮುಂದುವರಿಸಲಿವೆ ಎಂದರು.
ಇವುಗಳೊಂದಿಗೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗಳನ್ನು ಹೊತ್ತಿದ್ದು, ಅಸೋಸಿಯೇಷನ್ ಮಹತ್ವದ ಪಾತ್ರ ಪಡೆದಿದೆ. ಪ್ರವಾಸೋದ್ಯಮವನ್ನು ಬೆಳೆಸುವುದು ಪ್ರತಿಯೊಬ್ಬ ಜವಾಬ್ದಾರಿ ನಾಗರಿಕನ ಕರ್ತವ್ಯವಾಗಿರುತ್ತದೆ ಎಂದು ತಿಳಿಸಿದರು.