ಲಕ್ನೋ, ಸೆ 03 (DaijiworldNews/MS): ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣವು ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಬಹುತೇಕ ಅರ್ಧದಷ್ಟು ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಆದರೆ, ಇತ್ತ ಧನಿಪುರ ಗ್ರಾಮದಲ್ಲಿ ಅಯೋಧ್ಯೆಯ ಹೊರವಲಯದ ಧನ್ನಿಪುರದ ಜಮೀನಿನಲ್ಲಿ ನಿರ್ಮಾಣಗೊಳ್ಳಬೇಕಾಗಿರುವ ನಿರ್ಮಾಣ ಕಾರ್ಯ ವಿಳಂಬವಾಗುತ್ತಲೇ ಬರುತ್ತಿದೆ.
ಅಯೋಧ್ಯೆಯ ನಿಗದಿತ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಲು ಸುಪ್ರೀಂಕೋರ್ಟ್ ಆದೇಶ ನೀಡಿ ಸುಮಾರು 3 ವರ್ಷ ಕಳೆಯಿತು. ಆದರೆ, ಅಗ್ನಿಶಾಮಕ ಸೇವೆ, ಮಾಲಿನ್ಯ ಮಂಡಳಿ, ನಾಗರೀಕ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರಗಳು (ಎನ್ಒಸಿ) ದೊರೆಯದ ಕಾರಣ ನಿರ್ಮಾಣ ಕಾರ್ಯ ವಿಳಂಭವಾಗುತ್ತಿದೆ.
ಸುಪ್ರೀಂ ಕೋರ್ಟ್ನ ನಿರ್ದೇಶನದ ಮೇರೆಗೆ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ಗೆ ಮಸೀದಿ ನಿರ್ಮಾಣಕ್ಕಾಗಿ ಧನ್ನಿಪುರ ಗ್ರಾಮದಲ್ಲಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು.
ಮಂಡಳಿಯು, ಮಸೀದಿ, ಆಸ್ಪತ್ರೆ ಮತ್ತು ಮ್ಯೂಸಿಯಂ ನಿರ್ಮಾಣಕ್ಕಾಗಿ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (IICF) ಟ್ರಸ್ಟ್ ಅನ್ನು ಸ್ಥಾಪಿಸಿದೆ . "ಅಗ್ನಿಶಾಮಕ ದಳ ಹೊರತುಪಡಿಸಿದರೆ ಬೇರಾವ ಇಲಾಖೆಯೂ ಸ್ಥಳ ಪರಿಶೀಲನೆ ನಡೆಸಿಲ್ಲ" ಐಐಸಿಎಫ್ ಕಾರ್ಯದರ್ಶಿ ಅಥರ್ ಹುಸೇನ್ ಸಿದ್ದಿಖಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.