ಬೆಂಗಳೂರು, ಸೆ 02 (DaijiworldNews/SM): ಚಿತ್ರದುರ್ಗದ ಮುರುಘಾಮಠದ ಮಠಾಧೀಶರಾದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಬೇಸರ ವ್ಯಕ್ತಪಡಿಸಿರುವ ಹಿರಿಯ ಪತ್ರಕರ್ತ ಪಿ. ಸಾಯಿನಾಥ್, 2017ರಲ್ಲಿ ಮುರುಘಾ ಮಠದಿಂದ ನೀಡಿದ್ದ ಬಸವಶ್ರೀ ಪ್ರಶಸ್ತಿಯನ್ನು ವಾಪಾಸ್ ಮಾಡಿದ್ದಾರೆ.
ಪ್ರತಿವರ್ಷ ಮಠದದಿಂದ ನೀಡುವ ಬಸವಶ್ರೀ ಪ್ರಶಸ್ತಿಗೆ 2017ರಲ್ಲಿ ಸಾಯಿನಾಥ್ ಅವರು ಆಯ್ಕೆಗೊಂಡಿದ್ದರು. 2017ರ ಅಕ್ಟೋಬರ್ 25ರಂದು ಮಠಾಧೀಶರಾದ ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಿದ್ದರು. ಪ್ರಶಸ್ತಿಯೊಂದಿಗೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗಿತ್ತು.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, "ಚಿತ್ರದುರ್ಗದ ಮುರುಘಾಮಠದ ಮಠಾಧೀಶರಾದ ಶಿವಮೂರ್ತಿ ಮುರುಘಾ ಶರಣರು ಭಾಗಿಯಾಗಿರುವ ಭೀಕರ ಬೆಳವಣಿಗೆಗಳ ಮಾಧ್ಯಮ ವರದಿಗಳಿಂದ ತಿಳಿದು ನಾನು ಹೆಚ್ಚು ವಿಚಲಿತನಾಗಿದ್ದೇನೆ. ಅವರು ಈಗ ಪೋಕ್ಸೊ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯಡಿ ಮಕ್ಕಳ ಮೇಲೆ, ವಿಶೇಷವಾಗಿ ಪ್ರೌಢಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಮಕ್ಕಳ ಮೇಲಿನ ಯಾವುದೇ ರೀತಿಯ ಅಪರಾಧಗಳನ್ನು ಖಂಡಿಸಲು ಯಾವುದೇ ಪದಗಳು ಬಲವಾಗಿಲ್ಲ." ಎಂದು ಹೇಳಿದ್ದಾರೆ.