ಬೆಂಗಳೂರು, ಸೆ 02 (DaijiworldNews/DB): ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತದೇ ಹಳೆ ಕ್ಯಾಸೆಟ್, ಆತ್ಮವಂಚನೆಯ ಮಾತುಗಳನ್ನಾಡಿದ್ದಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ನರೇಂದ್ರ ಮೋದಿ ಶೇ. 40 ಕಮಿಷನ್ ಲೂಟಿ ಬಗ್ಗೆ ಮಾತನಾಡದಿರುವುದು ಆತ್ಮ ವಂಚಕತನವಲ್ಲವೇ ಎಂದು ಪ್ರಶ್ನಿಸಿದೆ.
ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯಾಗುತ್ತಿದೆ ಎಂದು ಹಳೆ ಸುಳ್ಳನ್ನು ಪುನರಾವರ್ತಿಸುವ ಮೂಲಕ ತಮ್ಮ ನಯವಂಚಕತನವನ್ನು ತೋರಿದ್ದಾರ ಎಂದು ಕಾಂಗ್ರೆಸ್ ಆಪಾದಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಪ್ರಧಾನಿ ಮೋದಿಯವರು ನಿಮ್ಮ ಪಕ್ಕದಲೇ ನಿಂತಿದ್ದರು, ನೀವೇ ಸ್ವಾಗತಿಸಿದಿರಿ, ಸಂತೋಷ. ನೆರೆ ಹಾನಿ ಪ್ರದೇಶಗಳ ಭೇಟಿಗೆ ಪ್ರಧಾನಿಯನ್ನು ಆಹ್ವಾನಿಸಲಿಲ್ಲವೇಕೆ? ಅತಿವೃಷ್ಟಿ ವರದಿ ನೀಡಿ, ಪರಿಹಾರಕ್ಕೆ ಬೇಡಿಕೆ ಇಡಲಿಲ್ಲವೇಕೆ? ಜಿಎಸ್ಟಿ ಬಾಕಿ ಮತ್ತು ರಾಜ್ಯದ ಪಾಲಿನ ಅನುದಾನಗಳ ಬಿಡುಗಡೆಗೆ ಕೇಳಲಿಲ್ಲವೇಕೆ? ಸೇರಿದಂತೆ ವಿವಿಧ ಪ್ರಶ್ನೆಗಳನ್ನು ಕಾಂಗ್ರೆಸ್ ಕೇಳಿದೆ.
ಜನರನ್ನು ಕರೆತರಲು ಬಸ್ಸುಗಳು, ಬಲವಂತದ ಅದೇಶಗಳು, ನೋಡಲ್ ಅಧಿಕಾರಿಗಳು, ಮನೆ ಮನೆಯ ಆಹ್ವಾನಗಳು ಹಗಲು ರಾತ್ರಿಯ ಶ ತಪ್ರಯತ್ನಗಳು ನಡೆದಿದ್ದರೂ ಸಮಾವೇಶಕ್ಕೆ ಸೇರಿದ್ದು ಕೆಲವೇ ಸಾವಿರ ಜನ. ರಾಜ್ಯದ ಜನತೆಗೆ ಮೋದಿ ಮೋಸದ ಅಸಲಿ ಬಂಡವಾಳ ತಿಳಿದು ಹೋಗಿದೆ. ರಾಜ್ಯದ ಭ್ರಷ್ಟ ಸರ್ಕಾರದ ಮೇಲೆ ಆಕ್ರೋಶ ಇಮ್ಮಡಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.