ಚಂಡೀಗಢ, ಸೆ 02 (DaijiworldNews/DB): ಲೈಂಗಿಕ ಕಿರುಕುಳಕ್ಕೆ ವಿರೋಧಿಸಿದಕ್ಕೆ ಮಹಿಳೆಯೊಬ್ಬರನ್ನು ವ್ಯಕ್ತಿಯೊಬ್ಬ ರೈಲಿನಿಂದ ಹೊರಕ್ಕೆ ತಳ್ಳಿದ ಘಟನೆ ಹರಿಯಾಣದ ಫತೇಬಾದ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.
30 ವರ್ಷದ ಮಹಿಳೆ ಸಾವನ್ನಪ್ಪಿದವರು. ಮಹಿಳೆ ತನ್ನ ಒಂಬತ್ತು ವರ್ಷದ ಪುತ್ರನೊಂದಿಗೆ ರೋಹ್ಟಕ್ನಿಂದ ಟೊಹಾನಾಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಆದರೆ ಫತೇಬಾದ್ನ ತೋಹಾನಾ ಪಟ್ಟಣದ ನಿಲ್ದಾಣಕ್ಕೆ ರೈಲು ಬಂದಾಗ ಅವರನ್ನು ಸ್ವೀಕರಿಸಲು ಬಂದಿದ್ದ ಪತಿ ಮಗ ಒಂಟಿಯಾಗಿ ಅಳುತ್ತಿರುವುದು ಕಂಡು ವಿಚಾರಿಸಿದಾಗ ವಿಷಯ ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಘಟನೆ ವೇಳೆ ಮೂವರನ್ನು ಹೊರತುಪಡಿಸಿ ಇಡೀ ಕೋಚ್ ಖಾಲಿಯಾಗಿದ್ದ ಕಾರಣ ಸಹ ಪ್ರಯಾಣಿಕರಿಗೆ ಈ ವಿಚಾರ ಗೊತ್ತಾಗಿಲ್ಲ. ಮಹಿಳೆ ಒಂಟಿಯಾಗಿ ಪ್ರಯಾಣಿಸುವುದನ್ನು ಗಮನಿಸಿ ಆರೋಪಿಯು ಕಿರುಕುಳ ನೀಡಲು ಮುಂದಾಗಿದ್ದು, ಈ ವೇಳೆ ಆಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕುಪಿತಗೊಂಡ ಆರೋಪಿ ರೈಲಿನಿಂದ ಆಕೆಯನ್ನು ಹೊರಗೆ ತಳ್ಳಿ ಆತನೂ ಜಿಗಿದಿದ್ದಾನೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಘಟನೆಗೆ ಕಾರಣನಾದ ಆರೋಪಿ ಸಂದೀಪ್ (27) ಎಂಬಾತನನ್ನು ಪೊಲೀಸರು ಹಿಡಿದಿದ್ದಾರೆ. ಆದರೆ ಆತ ರೈಲಿನಿಂದ ಜಿಗಿದ ಕಾರಣ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಆರೋಪದಡಿಯಲ್ಲಿ ಆತನನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿರುವುದಾಗಿ ತಿಳಿದು ಬಂದಿದೆ.
ರೈಲು ಇನ್ನೂ 20 ಕಿ.ಮೀ ಕಿಮೀ ದೂರದಲ್ಲಿ ಬರುತ್ತಿದ್ದಾಗಲೇ ಆಕೆ ನನಗೆ ಕರೆ ಮಾಡಿ ರೈಲ್ವೇ ಸ್ಟೇಷನ್ಗೆ ಬರುವಂತೆ ಹೇಳಿದ್ದಳು. ಆದರೆ ಈಗ ಅವಳೇ ಇಲ್ಲದಂತಾಗಿದೆ ಎಂದು ಆಕೆಯ ಪತಿ ಅಳಲು ತೋಡಿಕೊಂಡಿದ್ದಾರೆ. ಪೊಲೀಸರು ಮತ್ತು ಮನೆಯವರ ಸುದೀರ್ಘ ಹುಡುಕಾಟದ ಬಳಿಕ ಎತ್ತರದ ಪೊದೆಗಳಿರುವ ಜಾಗದಲ್ಲಿ ಶುಕ್ರವಾರ ಬೆಳಗ್ಗೆ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ.