ಮುಂಬೈ, ಸೆ 02 (DaijiworldNews/DB): 4 ಕೋಟಿ ರೂಪಾಯಿ ಮೌಲ್ಯದ 210 ಕೆ.ಜಿಯಷ್ಟು ಗಾಂಜಾ ಹಾಗೂ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ರಾಯಗಢ ಜಿಲ್ಲೆಯ ಖೋಪೋಲಿಯಲ್ಲಿ ಬಂಧಿಸಲಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಶುಕ್ರವಾರ ಮಾಹಿತಿ ನೀಡಿರುವ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್ಸಿಬಿ) ಅಧಿಕಾರಿಯೊಬ್ಬರು, ಮುಂಬೈಯಿಂದ 100 ಕಿ.ಮೀ ದೂರದಲ್ಲಿರುವ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಹೆದ್ದಾರಿಯ ಖೋಪೋಲಿಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಂತಾರಾಜ್ಯ ಮಾದಕ ವಸ್ತು ಕಳ್ಳಸಾಗಾಣೆ ಗ್ಯಾಂಗ್ ಬಗ್ಗೆ ಸುಳಿವು ಲಭ್ಯವಾದ ಕಾರಣ ಮುಂಬೈ ಎನ್ಸಿಬಿ ತಂಡವು ಕಾರ್ಯಾಚರಣೆಗಿಳಿದಿತ್ತು. ಈ ಕಾರ್ಯಾಚರಣೆಯಲ್ಲಿ ಮುಂಬೈ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಂದು ಬಣ್ಣದ ಅಂಟಿನ ಟೇಪ್ಗಳಿಂದ ಮುಚ್ಚಿದ್ದ 98 ಪ್ಯಾಕೆಟ್ಗಳಲ್ಲಿ ಆತ ಗಾಂಜಾವನ್ನು ಸಾಗಿಸುತ್ತಿದ್ದ. 4 ಕೋಟಿ ರೂಪಾಯಿ ಮೌಲ್ಯದ 210 ಕೆ.ಜಿಯಷ್ಟು ಗಾಂಜಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ. ಆಂಧ್ರಪ್ರದೇಶ-ಒಡಿಶಾ ಗಡಿಯಿಂದ ಇದನ್ನು ಪಡೆದುಕೊಂಡಿರುವ ಶಂಕೆಯಿದೆ ಎಂದು ಅವರು ತಿಳಿಸಿರುವುದಾಗಿ ವರದಿಯಾಗಿದೆ.