ಬೆಂಗಳೂರು, ಸೆ 02 (DaijiworldNews/DB): ಸಾರಿಗೆ ನೌಕರರ ಆತ್ಮಹತ್ಯೆ ವಿಚಾರವಾಗಿ ಸಾರಿಗೆ ಸಚಿವ ಶ್ರೀರಾಮುಲು ನೈತಿಕ ಹೊಣೆ ಹೊತ್ತ ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಾರ್ಟಯ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಭಾಸ್ಕರ್ ರಾವ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಆಮ್ ಆದ್ಮಿ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಸಾರಿಗೆ ಇಲಾಖೆಯಲ್ಲಿ ಸಚಿವ ರಾಮುಲು ಅವಧಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮಗಳೇ ಹೆಚ್ಚಾಗಿವೆ. ಉನ್ನತ ಅಧಿಕಾರಿಗಳು ನೌಕರರಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಮೂವರು ಸಾರಿಗೆ ನೌಕರರು ತಮ್ಮ ಜೀವವನ್ನೇ ಕಳೆದುಕೊಳ್ಳಬೇಕಾಗಿ ಬೆಂದಿದೆ. ಸಾರಿಗೆ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಗಣಿ, ಬನಶಂಕರಿ, ಚನ್ನಸಂದ್ರ ಡಿಪೋಗಳಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಾರಿಗೆ ಸಚಿವರಾಗಲೀ, ಮುಖ್ಯಮಂತ್ರಿಯವರಾಗಲೀ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಹಿಸಿದ್ದಾರೆ. ಅವರ ಕುಟುಂಬಕ್ಕೆ ಪರಹಾರ ನೀಡುವ ಸೌಜನ್ಯವನ್ನೂ ತೋರಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಸಾರಿಗೆ ನೌಕರರಿಗೆ ಸರ್ಕಾರ ಯಾವುದೇ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿಲ್ಲ. ಸಾರಿಗೆ ಸಚಿವ ಸ್ಥಾನಕ್ಕೆ ಸಮರ್ಥರ ನೇಮಕವಾದಲ್ಲಿ ಮಾತ್ರ ನೌಕರರ ಸಮಸ್ಯೆ ನಿವಾರಣೆಯಾಗಲು ಸಾಧ್ಯ. ಇದುವರೆಗೆ ಇಲಾಖೆಯ ವಿವಿಧ ನಿಗಮಗಳಲ್ಲಿ ಮೂವತ್ತಕ್ಕೂ ಅಧಿಕ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಡಿಪೋ ವ್ಯವಸ್ಥಾಪಕರೇ ಕಾರಣವಾಗಿದ್ದು, ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪಕ್ಷ ಪ್ರತಿಭಟನೆ ನಡೆಸಿದರೂ ಯಾವುದೇ ಕ್ರಮ ಈವರೆಗೆ ಆಗಿಲ್ಲ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಡ್, ಬಿಎಂಟಿಸಿ ನೌಕರರ ಸಂಘದ ಮುಖಂಡ ಆನಂದ್ ಉಪಸ್ಥಿತರಿದ್ದರು.