ಚಿತ್ರದುರ್ಗ, ಸೆ 02 (DaijiworldNews/DB): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎರಡನೇ ಆರೋಪಿಯ ಬಂಧನವಾಗಿದೆ. ಮುರುಘಾ ಮಠದಲ್ಲಿ ಲೇಡಿ ವಾರ್ಡನ್ ಆಗಿರುವ ರಶ್ಮಿ ಎಂಬಾಕೆಯನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.
ಈಕೆಯನ್ನು ಗುರುವಾರ ತಡರಾತ್ರಿ ಪೊಲೀಸರು ವಿಚಾರಣೆ ನಡೆಸಿದ್ದರು. ಇಂದು ಆಕೆಯ ಬಂಧನವಾಗಿದೆ ಎಂದು ಚಿತ್ರದುರ್ಗ ಎಸ್ಪಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮುಖ್ಯ ಆರೋಪಿ ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಶರಣರನ್ನು ಕಳೆದ ರಾತ್ರಿ ಬಂಧಿಸಲಾಗಿತ್ತು.
ಸ್ವಾಮೀಜಿಯವರಿಗೆ ಹಣ್ಣು ಕೊಂಡೋಗಿ ಎಂಬುದಾಗಿ ರಶ್ಮಿ ನಮ್ಮಲ್ಲಿ ಹೇಳುತ್ತಿದ್ದರು ಎಂದು ಸಂತ್ರಸ್ತ ಬಾಲಕಿಯರು ಆರೋಪಿಸಿದ್ದರು. ಅಲ್ಲದೆ ರಶ್ಮಿ ಸೇರಿದಂತೆ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ವಿರುದ್ಧ ಅತ್ಯಾಚಾರಕ್ಕೆ ಯತ್ನ, ಹಿಂಸೆ ಸಂಬಂಧಿಸಿ ದೂರು ನೀಡಿದ್ದಾರು. ಎಸ್.ಕೆ.ಬಸವರಾಜನ್ ವಿರುದ್ಧ ಸೆಕ್ಷನ್ 354ರಡಿ, ಬಸವರಾಜನ್ ಹಾಗೂ ಪತ್ನಿ ಸೌಭಾಗ್ಯ ಬಸವರಾಜನ್ ವಿರುದ್ಧ ಐಪಿಸಿ ಸೆಕ್ಷನ್ 341, 342, 504, 506ರಡಿ ಪ್ರಕರಣ ದಾಖಲಾಗಿತ್ತು. ಬಳಿಕ ನಿನ್ನೆ ಬಸವರಾಜನ್ ದಂಪತಿಗೆ ಜಾಮೀನು ಮಂಜೂರಾಗಿತ್ತು.