ಹೈದರಾಬಾದ್, ಸೆ 02 (DaijiworldNews/DB): ಮದುವೆಯಾಗುವುದಾಗಿ ನಂಬಿಸಿ ಕಾರ್ಯಕರ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ತೆಲಂಗಾಣದ ನಾರಾಯಣಪೇಟೆ ಜಿಲ್ಲಾ ಕಾಂಗ್ರೆಸ್ ಮುಖಂಡ ಕುಂಬಂ ಶಿವಕುಮಾರ್ ರೆಡ್ಡಿ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಹೊಟೇಲೊಂದರಲ್ಲಿ ಮದ್ಯದ ಅಮಲಿನಲ್ಲಿ ಶಿವಕುಮಾರ್ ರೆಡ್ಡಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಖಾಸಗಿ ಫೋಟೋಗಳನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾರೆ. ಹೈದರಾಬಾದ್ನ ಪುಂಜಗುಟ್ಟ ಪೊಲೀಸರು ಆರೋಪಿ ವಿರುದ್ದ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 420 (ವಂಚನೆ), 476 ಐಪಿಸಿ (ಅತ್ಯಾಚಾರ) ಮತ್ತು 506 ಐಪಿಸಿ (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮದ್ಯದ ಅಮಲಿನಲ್ಲಿ ಆತ ತನ್ನ ರೂಂಗೆ ನುಗ್ಗಿ ಲೈಂಗಿಕ ಕ್ರಿಯೆಗೆ ಒತ್ತಾಯ ಹೇರಿದ್ದಾರೆ. ನಿರಾಕರಿಸಿದಾಗ ದೈಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಹಿಂದೂ ಸಂಪ್ರದಾಯದಂತೆ ಹಳದಿ ದಾರ ಕಟ್ಟಿ ಮದುವೆಯಾಗಿದ್ದೇನೆಂದು ನಂಬಿಸಿದ್ದರು. ಮಾತನಾಡುವುದಕ್ಕೆಂದು ಹೊಟೇಲ್ಗೆ ಕರೆಸಿ ಮಾತ್ರೆ ತಿನ್ನಿಸಿ ಅತ್ಯಾಚಾರ ಎಸಗಿದ್ದು, ಖಾಸಗಿ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಪ್ರಜ್ಞೆ ಬಂದ ಬಳಿಕ ಅದನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಸಂತ್ರಸ್ತ ಮಹಿಳೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯೆ. ಇವರು 2020ರಲ್ಲಿ ನಾರಾಯಣಪೇಟೆ ಕ್ಷೇತ್ರದಲ್ಲಿ ಮುನ್ಸಿಪಲ್ ಚುನಾವಣೆಗಳನ್ನು ಪ್ರಚಾರ ಮಾಡಲು ನಿಯೋಜನೆಗೊಂಡಿದ್ದ ವೇಳೆ ಅಲ್ಲಿನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕುಂಬಂ ಶಿವಕುಮಾರ್ ರೆಡ್ಡಿ ಅವರನ್ನು ಭೇಟಿಯಾಗಿದ್ದರು. ಅಲ್ಲಿಂದ ಅವರು ಮಹಿಳೆಯೊಂದಿಗೆ ನಿಕಟವಾಗಿ ಮಾತನಾಡಲು ಆರಂಭಿಸಿದ್ದು, ಸಂದೇಶಗಳನ್ನೂ ರವಾನಿಸಿದ್ದರು. ಒಂದು ದಿನ ಮದುವೆಯಾಗುವ ಬಗ್ಗೆ ಇಚ್ಚೆ ವ್ಯಕ್ತಪಡಿಸಿದ್ದರು ಎಂದು ದೂರಿನಲ್ಲಿ ಮಹಿಳೆ ವಿವರಿಸಿದ್ದಾರೆ.