ಒಡಿಶಾ, ಸೆ 02 (DaijiworldNews/MS): ಒಡಿಶಾದ ಪರಾಜ ಬುಡಕಟ್ಟು ಸಮುದಾಯದ ಸದಸ್ಯರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಮಲಾ ಪೂಜಾರಿ ಅವರನ್ನು ಡಿಸ್ಚಾರ್ಜ್ ಮಾಡುವ ಮೊದಲು ಕಟಕ್ನ ಆಸ್ಪತ್ರೆಯೊಳಗೆ ನೃತ್ಯ ಮಾಡಲು ಒತ್ತಾಯಿಸಿದ ಸಾಮಾಜಿಕ ಕಾರ್ಯಕರ್ತೆಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ವೃದ್ಧೆ ಕಮಲಾ ಪೂಜಾರಿ ಅವರೊಂದಿಗೆ ಸಾಮಾಜಿಕ ಕಾರ್ಯಕರ್ತೆ ಮಮತಾ ಬೆಹೆರಾ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ.
"ನಾನು ಎಂದಿಗೂ ನೃತ್ಯ ಮಾಡಲು ಬಯಸಲಿಲ್ಲ ಆದರೆ ನನಗೆ ಒತ್ತಾಯಿಸಲಾಯಿತು. ನಾನು ಪದೇ ಪದೇ ನಿರಾಕರಿಸಿದರೂ ಅವರು (ಮಮತಾ ಬೆಹೆರಾ) ಕೇಳಲಿಲ್ಲ. ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ, ”ಕಮಲಾ ಅವರು ಕೊರಾಪುಟ್ ಜಿಲ್ಲೆಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಮತಾ ಬೆಹೆರಾ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ವಿಫಲವಾದರೆ ಸಮಾಜ ಬಾಂಧವರು ಬೀದಿಗಿಳಿಯಲಿದ್ದಾರೆ ಎಂದು ಬುಡಕಟ್ಟು ಸಮುದಾಯದ ‘ಪರಜಾ ಸಮಾಜ’ದ ಅಧ್ಯಕ್ಷ ಹರೀಶ್ ಮುದುಳಿ ಹೇಳಿದ್ದಾರೆ.
ಸಾವಯವ ಕೃಷಿಗೆ ಉತ್ತೇಜನ ನೀಡಿದ ಮತ್ತು ಭತ್ತ ಸೇರಿದಂತೆ ವಿವಿಧ ಬೆಳೆಗಳ 100 ಕ್ಕೂ ಹೆಚ್ಚು ದೇಶೀಯ ಬೀಜಗಳನ್ನು ಸಂರಕ್ಷಿಸಿದ್ದಕ್ಕಾಗಿ 2019 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಕಮಲಾ ಪೂಜಾರಿ, ಮೂತ್ರಪಿಂಡದ ಸಮಸ್ಯೆಯಿಂದ ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು.
ಅವರು ಶೀಘ್ರ ಗುಣಮುಖರಾಗಲಿ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾರೈಸಿದ್ದಾರೆ. ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುನ್ನವೇ ಈ ಘಟನೆ ನಡೆದಿದೆ.