ಚಿತ್ರದುರ್ಗ, ಸೆ 02 (DaijiworldNews/MS):ಪೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಮಠದ ಶ್ರೀ ಗಳಿಗೆ ಎದೆನೋವು ಕಾಣಿಸಿಕೊಂಡ ಹಿನ್ನಲೆ ಜಿಲ್ಲಾ ಪೊಲೀಸ್ ಭದ್ರತೆಯಲ್ಲಿ ಚಿತ್ರದುರ್ಗದ ಕಾರಾಗೃಹದಿಂದ ಆಸ್ಪತ್ರೆಗೆ ರವಾನಿಸಲಾಗಿದೆ.
ಬಂಧನ ಹಿನ್ನಲೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ರಾತ್ರಿ 2 ಗಂಟೆ ಸುಮಾರಿಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ಶ್ರೀಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದರು. ಬಳಿಕ ಶ್ರೀಗಳನ್ನು ಚಿತ್ರದುರ್ಗದ ಕಾರಾಗೃಹಕ್ಕೆ ರವಾನಿಸಲಾಗಿತ್ತು. ವಿಚಾರಣಾಧೀನ ಕೈದಿಯಾಗಿದ್ದ ಮುರುಘಾ ಶಿವಮೂರ್ತಿ ಶರಣರಿಗೆ ಶ್ರೀಗಳನ್ನು ಸಾಮಾನ್ಯ ಬ್ಯಾರಕ್ ನಲ್ಲಿ ಇರಿಸಲಾಗಿದ್ದು, ಕೈದಿಯಾಗಿ 2261 ಸಂಖ್ಯೆ ನೀಡಲಾಗಿದೆ. ಆದರೆ ಶ್ರೀಗಳಿಗೆ ಇಂದು ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುರುಘಾ ಮಠದ ಶ್ರೀಗಳನ್ನು ಜೈಲಿನಿಂದ ಆಸ್ಪತ್ರೆಗೆ ರವಾನಿಸಲಾಗಿದೆ.
ಮುರುಘಾಮಠದ ಶ್ರೀಗಳ ಬಂಧನದ ಕುರಿತಂತೆ ಪ್ರತಿಕ್ರಿಯೆ ಮಠದ ಪರ ವಕೀಲ ಉಮೇಶ್, "ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿಲ್ಲ. ಕಾನೂನಿಗೆ ಗೌರವ ನೀಡಲೆಂದು ಸ್ವಾಮೀಜಿಯೇ ಪೊಲೀಸರಿಗೆ ಶರಣಾಗಿದ್ದಾರೆ. ಮಹಿಳಾ ವಾರ್ಡನ್ ಹೇಳಿಕೆಯ ಆಧಾರದ ಮೇಲೆ ಬಂಧನ ಆಗಿಲ್ಲ. ಬೇರೆ ಪ್ರಕರಣದ ವಿಚಾರವಾಗಿ ಮಹಿಳಾ ವಾರ್ಡನ್ ವಿಚಾರಣೆ ನಡೆದಿದೆ.
ಶ್ರೀಗಳಿಗೆ ಜಾಮೀನು ಕೋರಿ ಇಂದು ಕೋರ್ಟ್ಗೆ ಮತ್ತೆ ಅರ್ಜಿ ಸಲ್ಲಿಸುತ್ತೇವೆ. ನಾವು ನಿನ್ನೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ರದ್ದಾಗಿದೆ. ಇಂದು ಮತ್ತೊಮ್ಮೆ ಜಾಮೀನಿಗೆ ಅರ್ಜಿ ಸಲ್ಲಿಸುತ್ತೇವೆ. ಮುರುಘಾಶ್ರೀಗಳಿಗೆ ಗೆದ್ದು ಬರುವ ವಿಶ್ವಾಸ ಇದೆ "ಎಂದು ಅವರು ಹೇಳಿದ್ದಾರೆ