ಗುರುಗ್ರಾಮ್, ಸೆ 01 (DaijiworldNews/DB): ಸೊಹ್ನಾ ಮಾರುಕಟ್ಟೆಯ ಮಾಜಿ ಉಪಾಧ್ಯಕ್ಷ ಮತ್ತು ಬಿಜೆಪಿ ನಾಯಕ ಸುಖ್ಬೀರ್ ಅಲಿಯಾಸ್ ಸುಖಿ ಅವರನ್ನು ದುಷ್ಕರ್ಮಿಗಳು ಹಾಡಹಗಲೇ ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದಿದೆ.
ಗುರುಗ್ರಾಮದ ಸದರ್ ಬಜಾರ್ ಪ್ರದೇಶದಲ್ಲಿ ಘಟನೆ ನಡೆದಿದೆ. ಸುಖ್ಬೀರ್ ಬಂಟ್ಟೆ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದ ವೇಳೆ ಅಪರಿಚಿತ ಬಂದೂಕುಧಾರಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಗುರುಗ್ರಾಮ್ ಪಶ್ಚಿಮದ ಡಿಸಿಪಿ ದೀಪಕ್ ಸಹರನ್ ತಿಳಿಸಿರುವುದಾಗಿ ವರದಿಯಾಗಿದೆ. ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದರು.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಲಭ್ಯವಾಗಿದ್ದು, ಇಡೀ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ. ಸುಖ್ ಬೀರ್ ಅವರು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ನಿಕಟವರ್ತಿಯಾಗಿದ್ದರು ಎಂದು ತಿಳಿದು ಬಂದಿದೆ.