ಚಿತ್ರದುರ್ಗ, ಸೆ 01 (DaijiworldNews/DB): ಅತ್ಯಾಚಾರ ಯತ್ನ, ಕಿರುಕುಳ, ಮಕ್ಕಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ದಂಪತಿಗೆ ಗುರುವಾರ ಜಾಮೀನು ದೊರೆತಿದೆ.
ಎಸ್.ಕೆ. ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯ ಅವರಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಮುರುಘಾ ಮಠದ ಹಾಸ್ಟೆಲ್ ವಾರ್ಡನ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ದ ಅತ್ಯಾಚಾರ ಯತ್ನ, ಕಿರುಕುಳ, ಮಕ್ಕಳ ಅಪಹರಣ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಸಂಬಂಧಿಸಿ ಜಾಮೀನು ಕೋರಿ ಬಸವರಾಜನ್ ದಂಪತಿ ಪರ ವಕೀಲ ರಾಮಚಂದ್ರ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಅನಿತಾ ಕುಮಾರಿ ಅವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ.
ಆ. 26ರಂದು ಎಸ್.ಕೆ.ಬಸವರಾಜನ್ ಹಾಗೂ ಪತ್ನಿ ಸೌಭಾಗ್ಯ ಬಸವರಾಜನ್ ವಿರುದ್ಧ ಐಪಿಸಿ ಸೆಕ್ಷನ್ 341, 342, 504, 506ರಡಿ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಹಾಸ್ಟೆಲ್ನಲ್ಲಿ ಸ್ಥಳ ಮಹಜರು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.