ನವದೆಹಲಿ, ಸೆ 01 (DaijiworldNews/DB): ದಕ್ಷಿಣ ದೆಹಲಿಯ ಸಂಗಮ್ ವಿಹಾರ್ನಲ್ಲಿ ಬಾಲಕಿ ಮೇಲೆ ಗುಂಡು ಹಾರಿಸಿ ಆಕೆಯನ್ನು ಕೊಲ್ಲಲು ಯತ್ನಿಸಿದ್ದ ಪ್ರಮುಖ ಆರೋಪಿಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ಅಮಾನತ್ ಅಲಿ (19) ಬಂಧಿತ ಆರೋಪಿ. ಪ್ರಕರಣ ಸಂಬಂಧ ಈಗಾಗಲೇ ಬಾಬಿ (24) ಮತ್ತು ಪವನ್ ಅಲಿಯಾಸ್ ಸುಮಿತ್ (19) ಎಂಬಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 16 ವರ್ಷದ ಬಾಲಕಿಯು ಆರೋಪಿ ಅಮಾನತ್ ಅಲಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕದಲ್ಲಿದ್ದು, ಕಳೆದ ಆರು ತಿಂಗಳ ಹಿಂದೆ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಇದರಿಂದ ಆಕ್ರೋಶಗೊಂಡ ಆತ ಆಕೆಯನ್ನು ಕೊಲ್ಲಲು ಸಂಚು ರೂಪಿಸಿದ್ದ. ಇದಕ್ಕೆ ಬಾಬಿ ಮತ್ತು ಪವನ್ನನ್ನು ಸಂಪರ್ಕಿಸಿದ್ದ. ಬಾಲಕಿ ಶಾಲೆಯಿಂದ ಬರುತ್ತಿದ್ದ ವೇಳೆ ಆರೋಪಿಗಳು ಆಗಸ್ಟ್ 25 ರ ಮಧ್ಯಾಹ್ನ ಆಕೆಯ ಮೇಲೆ ಗುಂಡು ಹಾರಿಸಿದ್ದರು. ಗುಂಡು ಆಕೆಯ ಭುಜಕ್ಕೆ ತಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಳು.
ಇನ್ನು ಘಟನೆ ಬಗ್ಗೆ ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಂತ್ರಸ್ತೆಗೆ ಉತ್ತಮ ಚಿಕಿತ್ಸೆ ನೀಡಲು ಸರ್ಕಾರ ಪ್ರಯತ್ನಿಸಲಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದಿದ್ದರು.