ರಾಮನಗರ, ಸೆ 01 (DaijiworldNews/DB): ಪ್ರತಾಪ್ ಸಿಂಹ ಅವರೇನು ಇಂಜಿನಿಯರಾ? ಬರವಣಿಗೆ ಮಾಡಿಕೊಂಡಿದ್ದ ವ್ಯಕ್ತಿ ಮೋದಿ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದು, ಅವರಿಂದ ನಾವು ಕಲಿಯಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರಲ್ಲಿ ಮಳೆಯಿಂದ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಮೊದಲು ಒತ್ತುವರಿಯಾದ ನಾಲೆ ಕಾಲುವೆ ತೆರವು ಮಾಡಲಿ ಎಂಬ ಪ್ರತಾಪ್ ಸಿಂಹ್ ಅವರ ಟ್ವೀಟ್ಗೆ ಚೆನ್ನಪಟ್ಟಣದಲ್ಲಿ ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮೋದಿ ಹೆಸರಿನಲ್ಲಿ ಪ್ರತಾಪ್ ಸಿಂಹ ರಾಜಕೀಯ ಮಾಡುತ್ತಿದ್ದಾರೆ. ನಮ್ಮನ್ನು ಅವರು ಸುಮ್ಮನೆ ಕೆರಳಿಸುವುದು ಬೇಡ. ಹೆದ್ದಾರಿಯಲ್ಲಿ ನೀರು ನಿಂತಿರುವುದು ಒತ್ತುವರಿಯಿಂದಲ್ಲ, ಕಳಪೆ ಕಾಮಗಾರಿಯಿಂದಾಗಿ ಎಂಬುದನ್ನು ಪ್ರತಾಪ್ ಸಿಂಹ ತಿಳಿದುಕೊಳ್ಳಲಿ ಎಂದರು.
ಬೆಂಗಳೂರು ಮತ್ತು ಮೈಸೂರು ನಡುವೆ ನಿರ್ಮಾಣವಾಗುತ್ತಿರುವ ಎಕ್ಸ್ ಪ್ರೆಸ್ ಹೈವೇ ಕಾಮಗಾರಿ ಅವೈಜಾನಿಕಯಿಂದ ಕೂಡಿದ್ದು, ಇದರಿಂದಲೇ ರಾಮನಗರ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದೆ. ಬೆಂಗಳೂರಿನಲ್ಲಿಯೂ ಹಲವು ಮನೆಗಳಲ್ಲಿ ನೀರು ನಿಂತಿರುವುದನ್ನು ಮುಖ್ಯಮಂತ್ರಿಯವರು ಇಂದು ಭೇಟಿಯ ವೇಳೆ ನೋಡಿದ್ದಾರೆ. ಯಾಕೆ ಹೀಗಾಗುತ್ತಿದೆ ಎಂಬುದನ್ನು ಪ್ರತಾಪ್ ಸಿಂಹ ಅರ್ಥ ಮಾಡಿಕೊಳ್ಳಬೇಕು. ಇದು ಈಗಿನ ತೊಂದರೆಯಲ್ಲ, ಕುಮಾರಸ್ವಾಮಿಯಿಂದಾಗಿರುವ ನಿರ್ಧಾರಗಳೂ ಅಲ್ಲ. ಹಿಂದಿನ ಸರ್ಕಾರಗಳ ತಪ್ಪು ತೀರ್ಮಾನಗಳಿಂದಾಗಿ ಜನರು ಇಂದು ಕಷ್ಟ ಅನುಭವಿಸುವಂತಾಗಿದೆ ಎಂದು ತಿಳಿಸಿದರು.
ಅಕ್ರಮಗಳನ್ನು ನಾವು ತೆರವುಗೊಳಿಸುತ್ತೇವೆ. ಆದರೆ ಎಕ್ಸ್ಪ್ರೆಸ್ ಹೈವೇಯಲ್ಲಿನ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸೃಷ್ಟಿಯಾಗಿರುವ ಸಮಸ್ಯೆ ಇದು. ಪ್ರತಾಪ್ ಸಿಂಹ ಏನು ದೊಡ್ಡ ಇಂಜಿನಿಯರಾ ಎಂದು ಪ್ರಶ್ನಿಸಿದ ಅವರು, ಫೋಟೋ ತೆಗೆಸಿಕೊಳ್ಳಲು ಬಂದಿದ್ದರಲ್ಲ, ಈಗ ಎಷ್ಟು ಕಡೆ ಬಂದು ಪರಿಶೀಲನೆ ಮಾಡಿದ್ದಾರೆ? ಇವರಿಂದ ನಾನು ರಾಜಕೀಯ ಕಲಿಯಬೇಕಿಲ್ಲ. ಜನರ ಕಷ್ಟ ಸುಖ ನೋಡಿ ರಾಜಕೀಯ ಮಾಡಿದರೆ ಮಾತ್ರ ವಾಸ್ತವ ಅರಿವಾಗುತ್ತದೆ ಎಂದರು.
ಪ್ರತಾಪ್ ಸಿಂಹ ಬಿಜೆಪಿ, ಮೋದಿ ಹೆಸರಿನಲ್ಲಿ ಸಂಸದ ಆಗಿದ್ದಾರೆಯೇ ಹೊರತು, ಕಷ್ಟಪಟ್ಟು ಸಿಕ್ಕಿದ ಹುದ್ದೆಯಲ್ಲ ಎಂದು ಇದೇ ವೇಳೆ ಕಿಡಿ ಕಾರಿದರು.
ಕುಮಾರಸ್ವಾಮಿ ಯಾರಿಗಾದರೂ ದೂರು ನೀಡಲಿ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಯವರಲ್ಲದೆ, ಬೇರೆ ಯಾರಿಗೆ ನಾನು ಹೇಳಲಾಗುತ್ತದೆ? ಗಡ್ಕರಿಯವರ ಸಮಯ ಕೇಳಿದ್ದೇನೆ. ಸಮಯ ಸಿಕ್ಕಲ್ಲಿ ಎಕ್ಸ್ಪ್ರೆಸ್ ಹೈವೇ ವೀಡಿಯೋವನ್ನು ಅವರಿಗೆ ತಲುಪಿಸುತ್ತೇನೆ. ಮುಂದಿನ ನಿರ್ಧಾರವನ್ನು ಅವರೇ ಕೈಗೊಳ್ಳಲಿ ಎಂದು ಉತ್ತರಿಸಿದರು.
2019ರಿಂದ ರಾಜ್ಯದಲ್ಲಿ35 – 40 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ. ಆದರೆ ಎನ್ ಡಿಆರ್ ಎಫ್ ನಿಂದ ಕೇವಲ ಮೂರು ಸಾವಿರ ಕೋಟಿ ರೂ. ನೀಡಿ ಸುಮ್ಮನಾಗಿದ್ದಾರೆ. ಮೋದಿ ಮಂಗಳೂರಿಗೆ ಯಾವ ಪುರುಷಾರ್ಥಕ್ಕಾಗಿ ಬರುತ್ತಾರೆ? ಚುನಾವಣೆ ಉದ್ದೇಶದಿಂದ ಅವರು ರಾಜ್ಯಕ್ಕೆ ಬರುತ್ತಿದ್ದಾರೆಯೇ ಹೊರತು ಬೇರೇನಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯದಿದ್ದರೆ ಇದು ಪ್ರತಿವರ್ಷದ ಸಮಸ್ಯೆಯಾಗಿ ಉಳಿಯುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.