ಯಳಂದೂರು, ಸೆ 01 (DaijiworldNews/DB): ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಸೇತುವೆ ಇಲ್ಲದ ಕಾರಣ ಆಕ್ರೋಶಗೊಂಡ ಗ್ರಾಮಸ್ಥರು ಮಹಿಳೆಯೊಬ್ಬರ ಅಂತ್ಯಸಂಸ್ಕಾರವನ್ನು ಗ್ರಾಮ ಪಂಚಾಯತ್ ಆವರಣದಲ್ಲೇ ನೆರವೇರಿಸಿದ ಘಟನೆ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ನಡೆದಿದೆ.
ಚಂದ್ರಮ್ಮ (48) ಬುಧವಾರ ರಾತ್ರಿ ಸಾವನ್ನಪ್ಪಿದ್ದರು. ಹೊನ್ನುಹೊಳೆ ಕಾಲುವೆ ದಾಟಿ ಸ್ಮಶಾನಕ್ಕೆ ತೆರಳಬೇಕಾಗಿದ್ದು, ಸುವರ್ಣಾವತಿ ಜಲಾಶಯದ ಹೊರ ಹರಿವು ಹೆಚ್ಚಾಗಿ ನೀರು ಉಕ್ಕಿ ಹರಿದ ಪರಿಣಾಮ ಸೇತುವೆ ಇಲ್ಲದ ಕಾರಣ ಸ್ಮಶಾನಕ್ಕೆ ಶವ ಕೊಂಡೊಯ್ಯಲು ಕುಟುಂಬಿಕರಿಗೆ ಸಾಧ್ಯವಾಗಿಲ್ಲ. ಕಳೆದ ಹಲವು ವರ್ಷಗಳಿಂದ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಜಿಲ್ಲಾಡಳಿತ ಮತ್ತು ಶಾಸಕರುಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪಂಚಾಯತ್ ಆವರಣದಲ್ಲಿ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಗ್ರಾಮಸ್ಥರು ಇಲ್ಲಿ ಅಂತ್ಯಸಂಸ್ಕಾರಕ್ಕೆ ಮುಂದಾಗುತ್ತಿದ್ದಂತೆ ಪೊಲೀಸರು ಮತ್ತು ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದರಾದರೂ, ಒಪ್ಪದ ಗ್ರಾಮಸ್ಥರು ಅಂತ್ಯಸಂಸ್ಕಾರ ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಯಳಂದೂರಿನಲ್ಲಿ ಮಳೆ ಹಾನಿ ವೀಕ್ಷಣೆ ಕೈಗೊಂಡಿದ್ದ ಸಮಯದಲ್ಲೇ ಘಟನೆ ನಡೆದಿದೆ.