ಚಿತ್ರದುರ್ಗ, ಸೆ 01 (DaijiworldNews/MS): ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾಮಠದ ಡಾ. ಶಿವಮೂರ್ತಿ ಶರಣರ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯವು ನಾಳೆಗೆ (ಸೆ.2) ಮುಂದೂಡಿದೆ.
ವಿಚಾರಣೆ ಆರಂಭವಾಗುತ್ತಿದ್ದಂತೆ ಸಂತ್ರಸ್ತ ಅಪ್ರಾಪ್ತ ಬಾಲಕಿಯರನ್ನು ಪೊಲೀಸರು ನ್ಯಾಯ ಪೀಠದ ಮುಂದೆ ಹಾಜರುಪಡಿಸಿದರು. ಸಂತ್ರಸ್ತೆಯರ ಪರವಾಗಿ ವಕೀಲ ಶ್ರೀನಿವಾಸ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವಕೀಲರು ಹಾಜರಾಗಿದ್ದರು.
ಸಂತ್ರಸ್ತ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರ ಅಭಿಪ್ರಾಯ ಪರಿಗಣಿಸಿದ ನ್ಯಾಯಾಲಯವು ವಕೀಲ ಶ್ರೀನಿವಾಸ್ ಅವರ ಮನವಿಗೆ ಸಮ್ಮತಿಸಿತು. ಶ್ರೀನಿವಾಸ್ ಅವರಿಗೆ ಆಕ್ಷೇಪಣೆ ಸಲ್ಲಿಸಲು ಒಂದು ದಿನ ಅವಕಾಶ ನೀಡಿ ವಿಚಾರಣೆಯನ್ನು ನಾಳೆಗೆ ಮುಂದೂಡಿತು.
ಸಂತ್ರಸ್ತೆಯರು ನೀಡಿರುವ ಹೇಳಿಕೆಯ ವರದಿಯನ್ನು ತನಿಖಾಧಿಕಾರಿಗೆ ಸಲ್ಲಿಸಲಾಗಿತ್ತು.ಸಿಆರ್ಪಿಸಿ ಸೆಕ್ಷನ್ 164 ಹೇಳಿಕೆ ಆಧರಿಸಿ ಶ್ರೀಗಳಿಗೆ ಇಂದು ಪೊಲೀಸರು ನೊಟೀಸ್ ಜಾರಿ ನೀಡಬಹುದು ಎನ್ನಲಾಗಿತ್ತು. ಆದರೆ ಇದೀಗ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದೆ.