ನವದೆಹಲಿ, ಸೆ 01 (DaijiworldNews/MS): ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಅಭಿವೃದ್ಧಿಪಡಿಸಿದ ಕ್ವಾಡ್ರೈವೆಲೆಂಟ್ ಹ್ಯೂಮನ್ ಪ್ಯಾಪಿಲೋಮ ವೈರಸ್ ಲಸಿಕೆಯನ್ನು ದೆಹಲಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಫೆಡರಲ್ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಜಿತೇಂದ್ರ ಸಿಂಗ್ ಅವರು ಇಂದು ಬಿಡುಗಡೆ ಮಾಡಿದ್ದಾರೆ.
ಆ ಬಳಿಕ ಮಾತನಾಡಿದ ಸಚಿವ ಜಿತೇಂದ್ರ ಸಿಂಗ್ " ಕಿರಿಯ ವಯಸ್ಸಿನ ಮಹಿಳೆಯರಲ್ಲಿ ಪ್ರಚಲಿತದಲ್ಲಿರುವ ಗರ್ಭಕಂಠದ ಕ್ಯಾನ್ಸರ್ಗೆ, ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಭಾರತವು ಹೊರತಂದಿದೆ. ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲೇ ಈ ಲಸಿಕೆ ಸಿಗಲಿದೆ" ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ
" ನಾವು ಕೆಲವು ತಿಂಗಳುಗಳಲ್ಲಿ ಈ ಲಸಿಕೆಯ ಬೆಲೆಯನ್ನು ಘೋಷಿಸುತ್ತೇವೆ, ಇದರ ಅಂದಾಜು ಬೆಲೆ 200-400 ರೂ. ಆಗಿರಬಹುದು. ಭಾರತ ಸರ್ಕಾರದೊಂದಿಗೆ ಚರ್ಚಿಸಿದ ನಂತರ ನಾವು ಇದರ ಉತ್ಪಾದನೆಯನ್ನು ಅಂತಿಮಗೊಳಿಸುತ್ತೇವೆ. 2 ವರ್ಷಗಳಲ್ಲಿ 200 ಮಿಲಿಯನ್ ಡೋಸ್ ತಯಾರಿಸಲು ನಾವು ಸಿದ್ಧತೆ ನಡೆಸಿದ್ದೇವೆ. ಗರ್ಭಕಂಠದ ಕ್ಯಾನ್ಸರ್ ನ ಈ ಲಸಿಕೆ ಕೆಲವೇ ತಿಂಗಳುಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಅದನ್ನು ಮೊದಲು ನಮ್ಮ ದೇಶಕ್ಕೆ ಮತ್ತು ನಂತರ ಜಗತ್ತಿಗೆ ನೀಡುತ್ತೇವೆ" ಎಂದು ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನವಾಲಾ ತಿಳಿಸಿದ್ದಾರೆ.
ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಪ್ರಕಾರ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಜುಲೈನಲ್ಲಿ ಲಸಿಕೆಗೆ ಅನುಮತಿ ನೀಡಿತು.
ಇತ್ತೀಚೆಗೆ ಸಿದ್ಧಪಡಿಸಲಾಗಿರುವ ಪ್ರಮುಖ ಲಸಿಕೆಗಳಲ್ಲಿ ಇದೂ ಕೂಡ ಒಂದು. ಗರ್ಭಕಂಠದ ಕ್ಯಾನ್ಸರ್ ತಡೆಗೆ ಭಾರತೀಯ ಲಸಿಕೆಗಳು ಲಭ್ಯವಿರುತ್ತವೆ. 9-14 ವರ್ಷ ವಯಸ್ಸಿನ ಹುಡುಗಿಯರಿಗೂ ಲಭ್ಯವಾಗಲಿದೆ. ಇದನ್ನು 9-14 ವರ್ಷದ ಬಾಲಕಿಯರಿಗೆ ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮದಡಿ ನೀಡಲಾಗುವುದು. ಈ ವ್ಯಾಕ್ಸಿನೇಷನ್ ಗರ್ಭಕಂಠದ ಕ್ಯಾನ್ಸರ್ ಸಾಂಭವ್ಯವನ್ನು 80% ಕ್ಕಿಂತ ಹೆಚ್ಚು ಕಡಿಮೆ ಮಾಡುತ್ತದೆ. ಎಂದು ಕೋವಿಡ್ ಕಾರ್ಯಪಡೆಯ ಅಧ್ಯಕ್ಷ ಡಾ.ಎನ್.ಕೆ.ಅರೋರಾ ಹೇಳಿದ್ದಾರೆ.