ಕುಣಿಗಲ್, ಸೆ 01 (DaijiworldNews/MS): ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಮಾಜಿ ಸಂಸದ ಮುದ್ದಹನುಮೇಗೌಡ ಬೆಂಗಳೂರಿನಲ್ಲಿ ಘೋಷಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್ನಿಂದ ಸ್ಪರ್ಧಿಸುವುದಾಗಿ ಮಾಜಿ ಸಂಸದರು ಹೇಳುತ್ತಿದ್ದು, ಆದರೆ ಅವರ ಬೇಡಿಕೆಗೆ ಪಕ್ಷದ ಹಿರಿಯ ನಾಯಕರು ಒಪ್ಪಿರಲಿಲ್ಲ. ಡಿಕೆಶಿ ಸಂಬಂಧಿ, ಹಾಲಿ ಶಾಸಕ ರಂಗನಾಥ್ಗೆ ಟಿಕೆಟ್ ಕೊಡುವ ಸಾಧ್ಯತೆ ಇರುವ ಕಾರಣ ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ತುಮಕೂರು ನಗರ, ಗ್ರಾಮಾಂತರ, ಕುಣಿಗಲ್ ಮತ್ತು ಗುಬ್ಬಿ ಕ್ಷೇತ್ರದಲ್ಲಿ ಮುದ್ದಹನುಮೇಗೌಡ ಪ್ರಭಾವಿಯಾಗಿದ್ದರು. 2018ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ದೇವೇಗೌಡರಿಗೆ ಮುದ್ದಹನುಮೇಗೌಡರು ತುಮಕೂರು ಕ್ಷೇತ್ರ ಬಿಟ್ಟುಕೊಟ್ಟಿದ್ದರು.
ಸಿದ್ದರಾಮಯ್ಯ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಮುದ್ದಹನುಮೇಗೌಡರು, ರಾಜೀನಾಮೆ ನಿರ್ಧಾರ ಘೋಷಿಸುವ ಮೊದಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರನ್ನೂ ಭೇಟಿಯಾಗಿ ಅಸಮಾಧಾನ ತೋಡಿಕೊಂಡಿದ್ದರು. ಇಂದು ಸಂಜೆಯೊಳಗೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ.