ನವದೆಹಲಿ, ಸೆ 01 (DaijiworldNews/DB): ಬಿಜೆಪಿಯು ಆಪರೇಷನ್ ಕಮಲ ನಡೆಸಿ ದೆಹಲಿ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷವು ಕೇಂದ್ರೀಯ ತನಿಖಾ ದಳಕ್ಕೆ ಸಲ್ಲಿಸಿದ್ದ ದೂರನ್ನು ಸಿಬಿಐ ಬುಧವಾರ ಸ್ವೀಕರಿಸಿದೆ.
ಈ ಕುರಿತು ಮಾಹಿತಿ ನೀಡಿದ ಆಮ್ ಆದ್ಮಿ ಪಕ್ಷದ ಕಲ್ಕಾಜಿ ಶಾಸಕಿ ಆತಿಶಿ, ದೂರು ಸ್ವೀಕರಿಸುವಂತೆ ಒತ್ತಾಯಿಸಿ ನಾವು ಸಿಬಿಐ ಪ್ರಧಾನ ಕಚೇರಿ ಮುಂಭಾಗ ಪ್ರತಿಭಟಿಸಿದರ ಫಲವಾಗಿ ಇದೀಗ ದೂರು ಸ್ವೀಕರಿಸಿದ್ದಾರೆ. ಆದರೆ ಹತ್ತು ಮಂದಿ ಚುನಾಯಿತ ಜನಪ್ರತಿನಿಧಿಗಳು ಎರಡು ಗಂಟೆ ಕಾಲ ರಸ್ತೆಯಲ್ಲೇ ನಿಂತು ಕಾಯಬೇಕಾಗಿ ಬಂದಿದ್ದು ದುರದೃಷ್ಟಕರ. ಬಹುಶಃ ಬಿಜೆಪಿ ವಿರುದ್ದ ನಾವು ನೀಡುತ್ತಿರುವ ದೂರನ್ನು ಸ್ವೀಕರಿಸಲು ಸಿಬಿಐಗೆ ಭಯ ಉಂಟಾಗಿರಬಹುದು ಎಂದು ತಿಳಿಸಿದ್ದಾರೆ.
ದೇಶಾದ್ಯಂತ ಬಿಜೆಪಿ 277 ಮಂದಿ ಶಾಸಕರನ್ನು ಖರೀದಿ ಮಾಡಿದ್ದು, ಇದಕ್ಕಾಗಿ ಬರೋಬ್ಬರಿ 6,300 ಕೋಟಿ ರೂ. ಹಣ ವ್ಯಯಿಸಿದೆ. ದೆಹಲಿಯಲ್ಲಿ 40 ಮಂದಿ ಎಎಪಿ ಶಾಸಕರನ್ನು ಖರೀದಿಸಲೂ ಸಿದ್ದತೆ ನಡೆಸುತ್ತಿದೆ. ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದವರು ಇದೇ ವೇಳೆ ಒತ್ತಾಯಿಸಿದರು.
ಎಎಪಿ ಮುಖ್ಯ ಸಚೇತಕ ದಿಲೀಪ್ ಕೆ.ಪಾಂಡೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಜೆಪಿ ಕೊಂದಿದೆ. ಶಾಸಕರನ್ನು ಖರೀದಿಸಿ ಸರ್ಕಾರಗಳನ್ನು ಅಸ್ಥಿರಗೊಳಿಸುತ್ತಿರುವುದೇ ಆ ಪಕ್ಷದ ಉದ್ದೇಶ. ಈ ಬಗ್ಗೆ ಸಿಬಿಐನ ಯಾವೊಬ್ಬ ಅಧಿಕಾರಿಯೂ ಕಳವಳಗೊಂಡಿಲ್ಲ ಎಂದು ಆಪಾದಿಸಿದರು.
ನಮ್ಮ ದೂರಿನ ಕುರಿತು ಸಿಬಿಐ ತನಿಖೆ ಆರಂಭಿಸಿ ಬಿಜೆಪಿಯ ಆಪರೇಷನ್ ಕಮಲ ಪ್ರಕರಣವನ್ನು ದೇಶದ ಜನತೆ ಮುಂದೆ ಬಿಚ್ಚಿಡಲಿದೆ ಎಂಬ ವಿಶ್ವಾಸವಿದೆ. ತನಿಖೆಯ ಪ್ರಗತಿ ಪರಿಶೀಲನೆಯನ್ನು ಪ್ರತಿದಿನ ಪಕ್ಷದಿಂದ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಬಿಜೆಪಿಯು ಆಪರೇಷನ್ ಕಮಲ ನಡೆಸಿ ದೆಹಲಿ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷವು ಸಿಬಿಐ ಮುಖ್ಯಸ್ಥ ಸಬೋಧ್ ಕುಮಾರ್ ಜೈಸ್ವಾಲ್ ಅವರಿಗೆ ದೂರು ನೀಡಲು ಆಗಮಿಸಿದ್ದ ವೇಳೆ ಅವರನ್ನು ಕಚೇರಿ ಬಳಿ ತೆರಳದಂತೆ ಅವಕಾಶ ನಿರಾಕರಿಸಲಾಯಿತು. ಹೀಗಾಗಿ ಶಾಸಕರು ಕಚೇರಿ ಮುಂಭಾಗದಲ್ಲಿ ಸುಮಾರು ಎರಡು ಗಂಟೆ ಕಾಲ ಪ್ರತಿಭಟನೆ ನಡೆಸಿದ್ದರು. ಬಳಿಕ ದೂರು ನೀಡಲು ಅವಕಾಶ ಕಲ್ಪಿಸಿಕೊಡಲಾಯಿತು ಎಂದು ತಿಳಿದು ಬಂದಿದೆ.