ಬೆಂಗಳೂರು, ಸೆ 01 (DaijiworldNews/MS): "ಭ್ರಷ್ಟಾಚಾರದ ವಿಷಯ ಬಂದಾಗ ಸಿಎಂ ಬಸವರಾಜ ಬೊಮ್ಮಾಯಿ ಅವರು ತಲೆ ಆಡಿಸುವ 'ಮೂಕ ಬಸಪ್ಪ'ನಂತಾಗುತ್ತಾರೆ" ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಸಚಿವ ಮುನಿರತ್ನರ ವಿರುದ್ಧ ಕಮಿಷನ್ ಆರೋಪ ಬಂದರೆ ಮೌನ ಸಮರ್ಥನೆ, ಸಚಿವ ಆನಂದ್ ಸಿಂಗ್ರ ಭೂಕಬಳಿಕೆ ವಿಷಯಕ್ಕೆ ಮೌನ ವಹಿಸುತ್ತಾರೆ, ಶಿಕ್ಷಣ ಇಲಾಖೆಯ ಭ್ರಷ್ಟಾಚಾರಕ್ಕೆ ಮಾತಾಡುವುದಿಲ್ಲ ಎಂದೆಲ್ಲಾ ಆರೋಪಿಸಿರುವ ಕಾಂಗ್ರೆಸ್, ಸಿಎಂ ಬಸವರಾಜ ಬೊಮ್ಮಾಯಿಯವರೇ ಕುರ್ಚಿಗಾಗಿ ಭ್ರಷ್ಟಾಚಾರಕ್ಕೆ ಬೆಂಬಲವೇ ಎಂದು ಪ್ರಶ್ನಿಸಿದೆ.
ಇದಲ್ಲದೆ ಪ್ರತಿದಿನದ ಪ್ರಶ್ನೆಯ ಅಭಿಯಾನ ಭಾಗವಾಗಿ ಕಾಂಗ್ರೆಸ್ ಘಟಕ, ರಾಜ್ಯ ಸರ್ಕಾರಕ್ಕೆ " ಇಂದು ರೈತ ಬಂಧ ಸುರಕ್ಷಾ ವಿಮೆ"ಯ ಪ್ರಶ್ನೆ ಮುಂದಿಟ್ಟಿದೆ.
ಪ್ರಮಾಣ ವಚನದಲ್ಲಿ ಹಸಿರು ಶಾಲು ಹೊದ್ದು ಬಂದವರು ರೈತರ ಬದುಕಿನ ಮೇಲೆ ಮಣ್ಣು ಹೊದಿಸಿದರು! ಅಧಿಕಾರ ಸಿಗುವವರೆಗೂ ರೈತ ಬಂಧು,ನಂತರ ಆಳುವುದು ರೈತರ ಕೊಂದು!ಇದು ವಚನಭ್ರಷ್ಟ ಬಿಜೆಪಿಯ ವರಸೆಗಳು.ಪ್ರಣಾಳಿಕೆಯಲ್ಲಿದ್ದ ರೈತ ಬಂಧು ಸುರಕ್ಷಾ ವಿಮೆ ಎಂಬ ಆಕರ್ಷಕ ಭರವಸೆ ಏನಾಯ್ತು ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.