ಬೆಂಗಳೂರು, ಆ 31 (DaijiworldNews/SM): ಪೋಸ್ಕೋ ಪ್ರಕರಣದ ಆರೋಪಿ ಆಗಿರುವ ಮುರುಘಾ ಶರಣರ ವಿರುದ್ಧ ಸರ್ಕಾರ ಎಚ್ಚರಿಕೆಯ ಕ್ರಮ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ನನ್ನ ಮೌನದ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ದಾಖಲಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಮತ್ತು ಸಿದ್ದರಾಮಯ್ಯ ಮೌನಕ್ಕೆ ಶರಣನಾಗಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಇಂಥ ಪ್ರಕರಣಕ್ಕೆ ನಾನು ಮೌನಕ್ಕೆ ಶರಣಾಗುವ ಪ್ರಶ್ನೆಯೇ ಇಲ್ಲ. ಇದು ಸರಕಾರದ ಜವಾಬ್ದಾರಿ, ಅವರ ವಿರುದ್ಧ ಇರುವ ಆರೋಪಗಳ ಬಗ್ಗೆ ಮನಗಂಡು ಸಂಬಂಧಪಟ್ಟ ಇಲಾಖೆಗಳು ತೀರ್ಮಾನ ಮಾಡಬೇಕು, ಅದು ಅವರ ಕರ್ತವ್ಯ. ಇದನ್ನು ರಾಜಕೀಯವಾಗಿ ಯಾರು ಬಳಕೆ ಮಾಡಿಕೊಳ್ಳಬಾರದು ಎಂದು ಮಾರ್ಮಿಕವಾಗಿ ನುಡಿದರು.
ಪ್ರಕರಣಗಳಿಂದ ಧಾರ್ಮಿಕ ಕ್ಷೇತ್ರದ ಮೇಲೆ ಇರುವ ನಂಬಿಕೆಗೆ ಅಪಚಾರ ಆಗಬಾರದು. ಕಾನೂನು ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗೊಂದಲ ಆಗದಂತೆ ಸರಕಾರ ತೀರ್ಮಾನ ಮಾಡಬೇಕು. ಇಲ್ಲಿ ಸಮುದಾಯದ ಪ್ರಶ್ನೆ ಅಲ್ಲ, ದೇಶದಲ್ಲಿ ನಾವು ಕಾನೂನು ರಚನೆ ಮಾಡಕೊಂಡಿದ್ದೇವೆ. ಯಾರು ಯಾವ ಸ್ಥಾನದಲ್ಲಿ ಇದ್ದಾರೆ, ಅವರು ಇಲ್ಲಿ ಉತ್ತರ ಕೊಡಬೇಕು ಎಂದರು ಎಂದು ಹೇಳಿದರು.