ಬೆಂಗಳೂರು, ಆ 31 (DaijiworldNews/DB): ಕಾನೂನನ್ನು ಎಲ್ಲರೂ ಗೌರವಿಸಬೇಕು. ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಚಾರದ ಸಂಬಂಧ ಕೋರ್ಟ್ ನೀಡಿದ ತೀರ್ಪಿನಂತೆಯೇ ಎಲ್ಲರೂ ನಡೆದುಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಅಶಾಂತಿ ಮೂಡಿಸುವ ಕೆಲಸವನ್ನು ಯಾರೂ ಮಾಡಬಾರದು. ಯಾರ ಭಾವನೆಗೆ ಯಾರೂ ತೊಂದರೆ ಕೊಡಬಾರದು. ಕಾನೂನು ಪ್ರಕಾರ ನಡೆದುಕೊಂಡರೆ ಶಾಂತಿಯುತವಾಗಿಯೇ ಎಲ್ಲವೂ ಇರುತ್ತದೆ ಎಂದರು.
ಮಂಗಳೂರು ಎರಡನೇ ಮುಂಬೈಯಾಗಿ ಇಷ್ಟರಲ್ಲಾಗಲೇ ರೂಪುಗೊಳ್ಳಬೇಕಿತ್ತು. ಆದರೆ ಉದ್ಯೋಗ ನಷ್ಟವೇ ರಾಜ್ಯದಲ್ಲಿ ಹೆಚ್ಚುತ್ತಿದೆ. ಆರ್ಥಿಕತೆ ಕುಸಿತ ಕಂಡಿದೆ, ಗಲಾಟೆಗಳಾದಲ್ಲಿ ಯಾರು ಬಂಡವಾಳ ಹಾಕಲು ಮುಂದಾಗುತ್ತಾರೆ ಎಂದು ಪ್ರಶ್ನಿಸಿದರು.
ರಾಮನಗರದ ಮಳೆಹಾನಿ ಪ್ರದೇಶಕ್ಕೆ ನಿನ್ನೆ ಭೇಟಿ ನೀಡಿದ್ದ ವೇಳೆ ನನಗೇ ಮುಜುಗರವಾಯಿತು. ಮೋದಿಯನ್ನು ಕರೆಸಲಿ, ಅಥವಾ ಏನು ಬೇಕಾದರೂ ಮಾಡಲಿ. ಆದರೆ ಹೃದಯ ಜೋಡಿಸುವ ಕೆಲಸ ಮೊದಲಾಗಲಿ ಎಂದರು.
ಚಿಕ್ಕಪೇಟೆಗೂ ಕೆಜಿಎಫ್ ಬಾಬು ಅವರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ ಅವರು, ಕೆಜಿಎಫ್ ಬಾಬು ಚಿಕ್ಕಪೇಟೆ ಟಿಕೆಟ್ ಆಕಾಂಕ್ಷಿಯಾಗಿರುವುದರಿಂದ ಅಲ್ಲಿ ಕೆಲಸ ಮಾಡುತ್ತಿದ್ದಾರೆ, ಬಡವರಿಗೆ ಸಹಾಯ ಮಾಡುವುದಾದರೆ ಯಾರೂ ಬೇಡ ಎನ್ನುವುದಿಲ್ಲ. ಆದರೆ ಎಲ್ಲವೂ ಪಕ್ಷದ ಚೌಕಟ್ಟಿನಲ್ಲಿರಬೇಕು. ಶಿಸ್ತು ಮೀರದಂತೆ ಜಾಗೃತೆ ವಹಿಸಬೇಕಾದುದು ಪ್ರತಿಯೊಬ್ಬರ ಕರ್ತವ್ಯ. ಅವರಿಗೆ ಈಗಾಗಲೇ ನೊಟೀಸ್ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕೆಜಿಎಫ್ ಬಾಬು ಅವರು ಚಿಕ್ಕಪೇಟೆ ಕ್ಷೇತ್ರಕ್ಕೆ ಸಂಬಂಧಿಸಿ 350 ಕೋಟಿ ಯೋಜನೆ ರೂಪಿಸುವ ಕರೆ ನೀಡಿದ್ದು, ಈ ನಿಟ್ಟಿನಲ್ಲಿ ಅವರಿಗೆ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ನೀಡಿದೆ ಎನ್ನಲಾಗಿದೆ.