ಹರಿಯಾಣ, ಆ 31 (DaijiworldNews/DB): ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಸಾವು ಪ್ರಕರಣ ಸಂಬಂಧಿಸಿ ಆಕೆಯ ಫಾರ್ಮ್ಹೌಸ್ನಿಂದ ಪ್ರಮುಖ ದಾಖಲೆಗಳನ್ನು ಕಳವುಗೈದ ಆರೋಪಿ ಕಂಪ್ಯೂಟರ್ ಆಪರೇಟರ್ನನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಿವಂ ಎಂದು ಗುರುತಿಸಲಾಗಿದೆ. ಈತ ಫೋಗಟ್ ಫಾರ್ಮ್ ಹೌಸ್ನಿಂದ ಲ್ಯಾಪ್ಟಾಪ್, ಸಿಸಿಟಿವಿ ಕ್ಯಾಮರಾಗಳ ಡಿಜಿಟಲ್ ವಿಡಿಯೋ ರೆಕಾರ್ಡರ್ ಮತ್ತು ಇತರ ಕೆಲವು ಪ್ರಮುಖ ದಾಖಲೆಗಳನ್ನು ಕಳವು ಮಾಡಿದ್ದಾನೆ ಎಂದು ಕುಟುಂಬದವರು ಆರೋಪಿಸಿದ ಹಿನ್ನೆಲೆಯಲ್ಲಿ ಈತನನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಸೋನಾಲಿ ಸಹಚರ ಸುಧೀರ್ ಸಾಂಗ್ವಾನ್ನ ಸಹಾಯಕನಾಗಿದ್ದ ಶಿವಂ, ಸೋನಾಲಿ ಸಾವನ್ನಪ್ಪಿದ ಬಳಿಕ ದಾಖಲೆಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಮಾಹಿತಿ ಪಡೆದ ಸೋನಾಲಿ ಕುಟುಂಬ ಹಿಸಾರ್ನ ಪೊಲೀಸ್ ವರಿಷ್ಠಾಧಿಕಾರಿ ಲೋಕೇಂದರ್ ಸಿಂಗ್ ಅವರನ್ನು ಭೇಟಿಯಾಗಿ ಸಮಗ್ರವಾಗಿ ಚರ್ಚಿಸಿದ ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದರು.
ಹರಿಯಾಣ ಬಿಜೆಪಿ ನಾಯಕಿ ಹಾಗೂ ಟಿಕ್ ಟಾಕ್ ತಾರೆಯಾಗಿದ್ದ ಸೋನಾಲಿ ಫೋಗಟ್ ಆಗಸ್ಟ್ 23 ರಂದು ತನ್ನಿಬ್ಬರು ಸಹಚರರೊಂದಿಗೆ ಗೋವಾ ಪ್ರವಾಸ ಕೈಗೊಂಡಿದ್ದರು. ಆದರೆ ಮರುದಿನ ಉತ್ತರ ಗೋವಾದ ಆಸ್ಪತ್ರೆಗೆ ಅವರನ್ನು ಕರೆ ತರಲಾಗಿತ್ತು. ಅಲ್ಲಿ ಅವರು ಸಾವನ್ನಪ್ಪಿದ್ದು, ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದೇ ಸುದ್ದಿಯಾಗಿತ್ತು. ಬಳಿಕ ಸಾವಿನ ಬಗ್ಗೆ ಕುಟುಂಬಿಕರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ಆಕೆಯ ಇಬ್ಬರು ಸಹಚರರು ಸೇರಿದಂತೆ ಒಟ್ಟು ಈವರನ್ನು ಇವರೆಗೆ ಬಂಧಿಸಿದ್ದಾರೆ.