ನವದೆಹಲಿ, ಆ 31 (DaijiworldNews/DB): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ದೇಶದ ಮೊದಲ ವರ್ಚುವಲ್ ಶಾಲೆ ಆರಂಭವಾಗುತ್ತಿದೆ ಎಂಬುದನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು ಇಂದು ಘೋಷಿಸಿದ್ದಾರೆ. ಅಲ್ಲದೆ ದೇಶದಲ್ಲೇ ಇದೊಂದು ಕ್ರಾಂತಿಕಾರಿ ಬದಲಾವಣೆಯಾಗಿದೆ ಎಂದು ಬಣ್ಣಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದೇಶದ ಕಟ್ಟಕಡೆಯ ವಿದ್ಯಾರ್ಥಿಗೂ ಮೂಲ ಶಿಕ್ಷಣ ಲಭಿಸುವಂತಾಗಬೇಕು. ಹಾಗಿದ್ದಲ್ಲಿ ಮಾತ್ರ ಭಾರತ ವಿಶ್ವದಲ್ಲೇ ನಂಬರ್ 1 ರಾಷ್ಟ್ರವಾಗಲು ಸಾಧ್ಯ. ದೆಹಲಿಯಲ್ಲಿ ಶಿಕ್ಷಣಕ್ಕೆ ಸಂಬಂಧಿಸಿ ಹಲವು ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲಿ ವರ್ಚುವಲ್ ಶಾಲೆ ಮುಖ್ಯವಾಗಿದೆ ಎಂದರು.
ದೆಹಲಿ ಮಾದರಿ ವರ್ಚುವಲ್ ಶಾಲೆ ಇಂದಿನಿಂದ ಆರಂಭವಾಗುತ್ತಿದೆ. ಇದು ದೆಹಲಿ ಶಾಲಾ ಶಿಕ್ಷಣ ಮಂಡಳಿಯೊಂದಿಗೆ ಸಂಯೋಜನೆಗೊಂಡಿದೆ. 9ನೇ ತರಗತಿಗೆ ಪ್ರವೇಶಾತಿಗಾಗಿ ಇಂದಿನಿಂದಲೇ ಅರ್ಜಿ ಆಹ್ವಾನಿಸಲಾಗುತ್ತಿದೆ. ದೇಶಾದ್ಯಂತ ಯಾವುದೇ ವಿದ್ಯಾರ್ಥಿಯೂ ಇದಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಲೈವ್ ತರಗತಿ ನಡೆಯಲಿದ್ದು, ಅದರಲ್ಲಿ ಹಾಜರಾಗಿ ವಿದ್ಯಾರ್ಥಿಗಳು ಪಾಠ ಆಲಿಸಬಹುದು. ರೆಕಾರ್ಡ್ ಮಾಡಲಾದ ತರಗತಿಗಳು ಮತ್ತು ಅಧ್ಯಯನ ಸಾಮಾಗ್ರಿಗಳನ್ನು ಕೂಡಾ ವರ್ಚುವಲ್ ಶಾಲೆಯಲ್ಲಿ ಒದಗಿಸಲಾಗುತ್ತದೆ. ಜೆಇಇ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳಿಗೂ ಸಹಕಾರ ಮಾಡುವ ಉದ್ದೇಶ ಇಲ್ಲಿದೆ ಎಂದು ಸಿಎಂ ಕೇಜ್ರೀವಾಲ್ ವಿವರಿಸಿದರು.