ತುಮಕೂರು, ಆ 31 (DaijiworldNews/DB): ಕಾಂಗ್ರೆಸ್ ಪಕ್ಷಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮಿನಾರಾಯಣ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ತುಮಕೋರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ಪಕ್ಷದ ಇತ್ತೀಚಿನ ನಡವಳಿಕೆಗಳಿಂದ ಬೇಸತ್ತಿದ್ದೇನೆ. ಇದೇ ನಾನು ಪಕ್ಷ ತ್ಯಾಗ ಮಾಡಲು ಕಾರಣವಾಗಿದೆ. ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ.
ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿದ್ದ ಲಕ್ಷ್ಮಿನಾರಾಯಣ ಅವರು ವಿಧಾನ ಪರಿಷತ್ ಸದಸ್ಯತ್ವದ ಆಕಾಂಕ್ಷಿಯಾಗಿದ್ದರು. ಆದರೆ ಅವರ ಆಕಾಂಕ್ಷೆಗೆ ಪಕ್ಷದ ಕಡೆಯಿಂದ ಸ್ಪಂದನೆ ಸಿಕ್ಕಿರಲಿಲ್ಲ. ಈ ಕಾರಣದಿಂದ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೂ ಉತ್ತಮ ಸಂಬಂಧ ಹೊಂದಿರುವ ಲಕ್ಷ್ಮೀನಾರಾಯಣ ಅವರು ಮುಂದೆ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಆಮ್ ಆದ್ಮಿ ಪಕ್ಷ ಸೇರ್ಪಡೆ ಕುರಿತೂ ಸುದ್ದಿಗಳು ಹರಿದಾಡುತ್ತಿವೆ.