ನವದೆಹಲಿ, ಆ 31 (DaijiworldNews/DB): ಎಎಪಿ ಮುಖಂಡರ ಮೇಲೆ ಸಿಬಿಐಯನ್ನು ಬಳಸಿಕೊಂಡದ್ದಾಯ್ತು, ಈಗ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಿಡಿ ಕಾರಿದ್ದಾರೆ.
ಅರವಿಂದ ಕೇಜ್ರೀವಾಲ್ಗೆ ಅಧಿಕಾರದ ಅಮಲೇರಿದೆ ಎಂದು ಅಣ್ಣಾ ಹಜಾರೆಯವರು ಟೀಕಿಸಿದ ವಿಚಾರವಾಗಿ ದೆಹಲಿಯಲ್ಲಿ ಮಾತನಾಡಿದ ಅವರು, ಅಬಕಾರಿ ನೀತಿ ಸಂಬಂಧಿಸಿ ಎಎಪಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಮೇಲೆ ಸಿಬಿಐಯಿಂದ ದಾಳಿ ನಡೆಸಲಾಯಿತು. ಆದರೆ ಸಿಬಿಐ ಅಧಿಕಾರಿಗಳಿಗೆ ಅವರ ಮನೆಯಲ್ಲಿ ಏನೂ ಸಿಗಲಿಲ್ಲ. ಹೀಗಾಗಿ ಇದೀಗ ಅಣ್ಣಾ ಹಜಾರೆಯವರನ್ನು ನಮ್ಮ ವಿರುದ್ದ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಆಪಾದಿಸಿದರು.
ಸಿಬಿಐಗೆ ರಾಜಕೀಯ ಒತ್ತಡವಿರುವುದರಿಂದ ಅಧಿಕಾರಿಗಳು ಕಳೆದೊಂದು ವಾರದಿಂದ ಸಾಕಷ್ಟು ಒತ್ತಡ ಅನುಭವಿಸಿದ್ದಾರೆ. ಆದರೆ ಸಿಸೋಡಿಯಾ ಅವರ ಮನೆಯಲ್ಲಿ ಏನೂ ಸಿಗಲಿಲ್ಲ. ಹಾಗಾಗಿ ಸದ್ಯ ಸಿಸೋಡಿಯಾಗೆ ಸಿಬಿಐ ಅನೌಪಚಾರಿಕ ಕ್ಲೀನ್ಚಿಟ್ ನೀಡಿದೆ. ಬಿಜೆಪಿಯನ್ನು ಖಂಡಿತಾ ಜನ ನಂಬುವುದಿಲ್ಲ ಎಂದರು.
ಅಬಕಾರಿ ನೀತಿ ಅಕ್ರಮ ಆರೋಪ ವಿಚಾರವಾಗಿ ಅಣ್ಣಾ ಹಜಾರೆಯವರು ಕೇಜ್ರೀವಾಲ್ಗೆ ಪತ್ರ ಬರೆದಿದ್ದರು. ಅಲ್ಲದೆ ಅದರಲ್ಲಿ ಕೇಜ್ರೀವಾಲ್ 2012ರಲ್ಲಿ ಬರೆದ ’ಸ್ವರಾಜ” ಪುಸ್ತಕದ ಸಾಲುಗಳನ್ನು ಉಲ್ಲೇಖಿಸಿ ರಾಜಕೀಯ ಪ್ರವೇಶಕ್ಕೂ ಮುನ್ನ ಬರೆದ ಪುಸ್ತಕದಲ್ಲಿ ಗ್ರಾಮಸಭೆ ಮತ್ತು ಮದ್ಯ ನೀತಿಯ ಬಗ್ಗೆ ಏನು ಬರೆದಿರುವಿರಿ ಎಂಬುದನ್ನು ನಿಮಗೆ ನೆನಪಿಸುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದರು.