ನವದೆಹಲಿ, ಆ 31 (DaijiworldNews/DB): ಬುಡಕಟ್ಟು ಸಮುದಾಯದ ಮನೆಕೆಲಸದಾಕೆಗೆ ಚಿತ್ರ ಹಿಂಸೆ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿಯಿಂದ ಅಮಾನತುಗೊಂಡಿರುವ ನಾಯಕಿ ಸೀಮಾ ಪಾತ್ರಾ ಅವರನ್ನು ರಾಂಚಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮಾಜಿ ಐಎಎಸ್ ಅಧಿಕಾರಿ ಮಹೇಶ್ವರ ಪಾತ್ರ ಅವರ ಪತ್ನಿಯಾಗಿರುವ ಸೀಮಾ ಪಾತ್ರಾ ಬಂಧನಕ್ಕೆ ಹೆದರಿ ಪರಾರಿಯಾಗಿದ್ದರು. ಬಳಿಕ ರಾಂಚಿಯ ಅರ್ಗೋರಾದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಆಕೆಯನ್ನು ಬಂಧಿಸಲಾಯಿತು. ಮುಂದೆ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಸೀಮಾ ಪಾತ್ರ ತನ್ನ ಮನೆಯಲ್ಲಿ ಕೆಲಸಕ್ಕಿದ್ದ ಬುಡಕಟ್ಟು ಸಮುದಾಯದ ಸುನೀತಾ (29) ಎಂಬಾಕೆಯನ್ನು ನಾಲಗೆಯಿಂದ ಶೌಚಾಲಯ ಶುಚಿಗೊಳಿಸುವಂತೆ ಒತ್ತಾಯಿಸಿದ್ದಾರೆಂಬ ಆರೋಪವಿದೆ. ಅಲ್ಲದೆ ಸುನೀತಾಳ ದೇಹದಲ್ಲಿ ಗಾಯಗಳಿದ್ದವು. ಬಿಸಿ ವಸ್ತುಗಳಿಂದ ಸೀಮಾ ತನ್ನನ್ನು ಸುಡುತ್ತಿದ್ದಳು ಎಂಬುದಾಗಿ ಸುನೀತಾ ಆರೋಪಿಸಿದ್ದಳು. ಈ ಎಲ್ಲಾ ಆರೋಪಗಳ ಹಿನ್ನೆಲೆಯಲ್ಲಿ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.