ತೆಲಂಗಾಣ, ಆ 30 (DaijiworldNews/DB): ತಂದೆಯ ಕುಡಿತದ ಚಟ ಮತ್ತು ಹಿಂಸೆಯಿಂದ ಬೇಸತ್ತ ಏಳು ವರ್ಷದ ಬಾಲಕನೋರ್ವ ಪೊಲೀಸ್ ಠಾಣೆ ಮೆಟ್ಟಿಲೇರಿ ತಂದೆಯ ವಿರುದ್ದ ದೂರು ನೀಡಿದ ಘಟನೆ ತೆಲಂಗಾಣದ ರಾಜಣ್ಣ ಶ್ರೀಸಿಲ್ಲಾ ಜಿಲ್ಲೆಯಲ್ಲಿ ನಡೆದಿದೆ.
3ನೇ ತರಗತಿಯಲ್ಲಿ ಓದುತ್ತಿರುವ ಭರತ್ ಎಂಬ ಬಾಲಕ ತನ್ನ ತಂದೆ ಮುಸ್ತಾಬಾದ್ ನಿವಾಸಿ ಬಾಲಕೃಷ್ಣ ಎಂಬಾತನ ವಿರುದ್ದ ದೂರು ನೀಡಿದ್ದಾನೆ. ತಂದೆ ವಿಪರೀತ ಮದ್ಯ ಸೇವನೆ ಮಾಡಿ ತನ್ನ ತಾಯಿಗೆ ಹಾಗೂ ತನಗೆ ಮತ್ತು ಸಹೋದರಿಗೆ ಹೊಡೆಯುತ್ತಾನೆ. ಪ್ರತಿದಿನ ದೈಹಿಕ ಹಲ್ಲೆ ನಡೆಸುತ್ತಿದ್ದು, ಹಿಂಸೆಯನ್ನು ತಡೆಯಲಾಗುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಪ್ರತಿದಿನ ತಂದೆ ಕುಡಿದು ಬಂದು ತಾಯಿಗೆ ದೌರ್ಜನ್ಯ ಎಸಗುವುದನ್ನು ಬಾಲಕ ಸಹಿಸದಾಗಿದ್ದಾನೆ. ಒಂದು ದಿನ ಯಾರಿಗೂ ಹೇಳದೆ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ನಡೆದ ವಿಚಾರ ತಿಳಿಸಿದ್ದಾನೆ. ಬಾಲಕನ ಮುಗ್ದತೆ ಮತ್ತು ಅವನ ಅಂತರಾಳದ ನೋವನ್ನು ಆಲಿಸಿದ ಠಾಣೆಯ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ವರಲು ಅವರು ಬಾಲಕನ ತಂದೆ ಬಾಲಕೃಷ್ಣನನ್ನು ಠಾಣೆಗೆ ಕರೆಸಿ ಬುದ್ದಿವಾದ ಹೇಳಿದ್ದಾರೆ. ಅಲ್ಲದೆ ಮುಂದೆ ಈ ರೀತಿಯಾದರೆ ಪ್ರಕರಣ ದಾಖಲಿಸಿ ಜೈಲಿಗಟ್ಟುವುದಾಗಿ ಎಚ್ಚರಿಸಿದ್ದಾರೆ. ಪೊಲೀಸರೆದುರು ತಪ್ಪೊಪ್ಪಿಕೊಂಡಿರುವ ಬಾಲಕೃಷ್ಣ ಮುಂದೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.