ಪಂಜಾಬ್, ಆ 30 (DaijiworldNews/DB): ಪಂಜಾಬ್ ಗಾಯ ಸಿಧು ಮೂಸೆವಾಲ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬನನ್ನು ಅಜರ್ಬೈಜಾನ್ನಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್, ಹತ್ಯೆಯ ಪ್ರಮುಖ ಆರೋಪಿಗಳಲ್ಲೊಬ್ಬನಾದ ಸಚಿನ್ ಥಾಪನ್ ಬಿಷ್ಣೋಯ್ನನ್ನು ಪತ್ತೆ ಹಚ್ಚಲಾಗಿದೆ. ಆರೋಪಿ ಸಚಿನ್ ಮೊದಲು ದುಬೈಗೆ ಪರಾರಿಯಾಗಿದ್ದ. ಬಳಿಕ ಅಜೆರ್ಬೈಜಾನ್ನಲ್ಲಿ ತಲೆಮರೆಸಿಕೊಂಡಿದ್ದ. ಕೇಂದ್ರ ಸರ್ಕಾರ ಮತ್ತು ಕೇಂದ್ರ ಏಜೆನ್ಸಿಗಳ ಸಹಕಾರದೊಂದಿಗೆ ಆತನನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಶೀಘ್ರ ಆತನನ್ನು ಭಾರತಕ್ಕೆ ಕರೆ ತರಲಾಗುವುದು. ಈ ಸಂಬಂಧ ಎಲ್ಲಾ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
ಮೂಸೆವಾಲ ಹತ್ಯೆಗೂ ಮುನ್ನ ನಕಲಿ ಪಾಸ್ಪೋರ್ಟ್ ಬಳಸಿ ಸಚಿನ್ ಮತ್ತು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ, ಆರೋಪಿ ಅನ್ಮೋಲ್ ಬಿಷ್ಣೋಯ್ ದೇಶದಿಂದ ಪರಾರಿಯಾಗಿದ್ದರು. ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಗೋಲ್ಡಿ ಬ್ರಾರ್ ಈ ಹತ್ಯೆಯ ಹೊಣೆ ಹೊತ್ತಿದ್ದ. ಆತನೊಂದಿಗೆ ಸಚಿನ್ ಸಂಪರ್ಕದಲ್ಲಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಸಿಧು ಮೂಸೆವಾಲಾ ಎಂದೇ ಖ್ಯಾತರಾಗಿದ್ದ ಪಂಜಾಬಿ ಗಾಯಕ ಶುಭ್ ದೀಪ್ ಸಿಂಗ್ ಸಿಧು ಅವರನ್ನು ಮೇ 29ರಂದು ಪಂಜಾಬ್ ನ ಮಾನಸಾ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.