ಶಿವಮೊಗ್ಗ, ಆ 30 (DaijiworldNews/HR): ಆಗುಂಬೆ ಘಾಟ್ನಲ್ಲಿ ಭಾರೀ ವಾಹನ ಸಂಚಾರ ನಿಷೇಧದ ಆದೇಶವನ್ನು ಇನ್ನೂ ಒಂದು ತಿಂಗಳು ವಿಸ್ತರಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ಘಾಟಿಯ 11ನೇ ತಿರುವಿನಲ್ಲಿ ಭೂ ಕುಸಿತ ಉಂಟಾಗಿರುವ ಹಿನ್ನೆಲೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದ್ದು, ಆಗಸ್ಟ್ 31ರವರೆಗೆ ಈ ನಿಷೇಧ ವಿಧಿಸಲಾಗಿತ್ತು. ಆದರೆ ಈ ಭಾಗದಲ್ಲಿ ಮಳೆ ಮುಂದುವರೆದಿರುವುದರಿಂದ ಭಾರೀ ವಾಹನ ಸಂಚಾರ ನಿಷೇಧವನ್ನು ವಿಸ್ತರಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಇಂಜಿನಿಯರ್ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು.
ಹಾಗಾಗಿ ಆಗುಂಬೆ ಘಾಟ್ನಲ್ಲಿ ಭಾರೀ ವಾಹನ ಸಂಚಾರ ನಿಷೇಧದ ಆದೇಶವನ್ನು ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 30ರವರೆಗೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ತಿಳಿಸಿದ್ದಾರೆ.
ಇನ್ನು ಘಾಟ್ನಲ್ಲಿ ಲಘು ವಾಹನಗಳು ಮತ್ತು ಬಸ್ಸುಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದ್ದು, ಭಾರೀ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಸೂಚಿಸಿದ್ದಾರೆ.