ವಡೋದರಾ, ಆ 30 (DaijiworldNews/DB): ಗಣೇಶನ ಮೂರ್ತಿ ಮೆರವಣಿಗೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದು ಕಲ್ಲು ತೂರಾಟ ನಡೆಸಿದ ಘಟನೆ ಗುಜರಾತ್ನ ವಡೋದರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಸದ್ಯ ಘಟನೆ ಸಂಬಂಧ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾತ್ರಿ ಗಣೇಶ ಮೂರ್ತಿ ಹೊತ್ತ ಮೆರವಣಿಗೆ ನಡೆಯುತ್ತಿರುವ ಸೂಕ್ಷ್ಮ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೂಡಲೇ ಪೊಲೀಸರು ಆಗಮಿಸಿ ಶಾಂತವಾಗಿ ಮೂರ್ತಿ ಕೊಂಡೊಯ್ಯಲು ಅನುವು ಮಾಡಿಕೊಟ್ಟರು. ಕಲ್ಲು ತೂರಾಟದಲ್ಲಿ ಯಾರಿಗೂ ಗಾಯ ಉಂಟಾಗಿಲ್ಲ. ಸದ್ಯ ಪರಿಸ್ಥಿತಿ ಬಿಗಡಾಯಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಗಲಭೆ ಮತ್ತು ಕಾನೂನುಬಾಹಿರ ಸಭೆ ಆರೋಪದ ಮೇಲೆ ಹಲವರ ವಿರುದ್ದ ವಡೋದರಾ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಘಟನೆ ಸಂಬಂಧ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.