ಹೈದರಾಬಾದ್, ಆ 30 (DaijiworldNews/DB): ಬೆಕ್ಕಿನ ಕೂಗಿನಿಂದ ನಿದ್ರಾಭಂಗವಾಗಿದ್ದಕ್ಕೆ ಸಿಟ್ಟಾದ ಅಪ್ರಾಪ್ತ ಬಾಲಕ ಸಹಿತ ಇಬ್ಬರು ಬೆಕ್ಕಿನ ಮಾಲಕನಿಗೆ ಬೆಂಕಿ ಹಚ್ಚಿ ಕೊಂದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ರಂಗಾರೆಡ್ಡಿ ಜಿಲ್ಲೆಯ ಕೋತೂರು ಮಂಡಲದ ನಲ್ಲಾಪುರದ ನಿವಾಸಿ ಹರೀಶ್ವರ್ ರೆಡ್ಡಿ ಅಲಿಯಾಸ್ ಚಿಂಟು (20) ಮತ್ತು ಅಪ್ರಾಪ್ತ ಬಾಲಕ (17) ಆರೋಪಿಗಳು. ಬಂಜಾರಾ ಹಿಲ್ಸ್ ರಸ್ತೆ ಸಂಖ್ಯೆ 10ರ ಮಿಥಿಲಾನಗರದಲ್ಲಿರುವ ಡಾ.ಮೆನನ್ ಅವರ ಮನೆಯಲ್ಲಿ ಇಬ್ಬರೂ ವಾಸಿಸುತ್ತಿದ್ದರು. ಅದೇ ಮನೆಯಲ್ಲಿ ಭದ್ರತಾ ಸಿಬಂದಿಯಾದ್ದ ಎಜಾಜ್ ಹುಸೇನ್ (20) ಸಾವನ್ನಪ್ಪಿದವರು.
ಅಲ್ಲೇ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ ಅಸ್ಸಾಂ ಮೂಲದ ಬ್ರಾನ್ ಸ್ಟಿಲ್ಲಿಂಗ್ (20) ಮತ್ತು ಎಜಾಜ್ ಹುಸೇನ್ ಕೆಲಸ ಮುಗಿಸಿ ಬಾಡಿಗೆ ಮನೆಗೆ ಆಗಮಿಸುವ ವೇಳೆ ದಾರಿಯಲ್ಲಿ ಬೆಕ್ಕೊಂದು ಸಿಕ್ಕಿತ್ತು. ಅದನ್ನು ಎತ್ತಿಕೊಂಡು ರೂಂಗೆ ಬಂದಿದ್ದರು. ಆದರೆ ಈ ಬೆಕ್ಕು ರಾತ್ರಿ ವೇಳೆ ನಿರಂತರ ಕೂಗಾಟ ನಡೆಸುತ್ತಿತ್ತು. ಬೆಕ್ಕಿನ ಕೂಗಿಗೆ ನಿದ್ರಾಭಂಗವಾಗುತ್ತಿದೆ ಎಂದು ಕೋಪಗೊಂಡ ಹರೀಶ್ವರ್ ರೆಡ್ಡಿ ಅಪ್ರಾಪ್ತನೊಂದಿಗೆ ಸೇರಿ ಸೀದಾ ಎಜಾಜ್ ರೂಮ್ಗೆ ಹೋಗಿ ರೇಗಾಡಿದ್ದಾನೆ. ಈ ವೇಳೆ ಅಮಲಿನಲ್ಲಿದ್ದ ರೆಡ್ಡಿ ಸೇರಿ ಮೂವರ ನಡುವೆ ಮಾತಿನ ಚಕಮಕಿ ನಡೆದಿದೆ. ಅಪ್ರಾಪ್ತ ಬಾಲಕನು ಕೋಪದ ಭರದಲ್ಲಿ ಎಜಾಜ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಕೂಡಲೇ ಎಜಾಜ್ನನ್ನು ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗಂಭೀರ ಸುಟ್ಟ ಗಾಯಗಳಾದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಮೃತನ ಸ್ನೇಹಿತ ಬ್ರಾನ್ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಕೊಲೆ ಮಾಡಿರುವುದು ಗೊತ್ತಾಗಿದೆ ಎಂದು ವರದಿಯಾಗಿದೆ.