ಬೆಂಗಳೂರು, ಆ 30 (DaijiworldNews/DB): ಒಂದು ಬಾರಿಗೆ ಎಂಟು ಮಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಲಿಫ್ಟ್ನಲ್ಲಿ 17 ಮಂದಿ ಹೋಗಿ ಅರ್ಧದಲ್ಲೇ ಲಿಫ್ಟ್ ಲಾಕ್ ಆದ ಘಟನೆ ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಟ್ರಿನಿಟಿ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿರುವ ಲಿಫ್ಟ್ ಏಕಕಾಲಕ್ಕೆ ಎಂಟು ಮಂದಿಯನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಆದರೆ 20 ರಿಂದ 25 ವರ್ಷದೊಳಗಿನ 17 ಮಂದಿ ಯುವತಿಯರು ಒಂದೇ ಬಾರಿಗೆ ಲಿಫ್ಟ್ನೊಳಗೆ ಹೋಗಿದ್ದಾರೆ. ಸಾಮರ್ಥ್ಯಕ್ಕಿಂತ ಭಾರ ಹೆಚ್ಚಾದ ಹಿನ್ನೆಲೆಯಲ್ಲಿ ಲಿಫ್ಟ್ ಸ್ವಲ್ಪ ಮೇಲಕ್ಕೋಗಿ ಮಧ್ಯದಲ್ಲಿಯೇ ಸಿಲುಕಿಕೊಂಡಿದೆ. ಸುಮಾರು ಅರ್ಧ ಗಂಟೆ ಕಾಲ ಯುವತಿಯರು ಲಿಫ್ಟ್ನೊಳಗೇ ಬಾಕಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬಂದಿಯನ್ನು ಸ್ಥಳಕ್ಕೆ ಕರೆ ತರಲಾಯಿತು. ತತ್ಕ್ಷಣ ಆಗಮಿಸಿದ ಸಿಬಂದಿ ಲಿಫ್ಟ್ನಲ್ಲಿ ಸಿಲುಕಿದ ಯುವತಿಯರನ್ನು ರಕ್ಷಿಸಿದ್ದಾರೆ.
ಮೆಟ್ರೋ ನಿಲ್ದಾಣದಲ್ಲಿ ಹಿರಿಯ ನಾಗರಿಕರು, ರೋಗಿಗಳು ಮತ್ತು ವೈದ್ಯಕೀಯ ಸಮಸ್ಯೆ ಹೊಂದಿರುವವರಿಗಾಗಿ ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ. ಆದರೆ ಇದನ್ನು ಎಲ್ಲರೂ ಬಳಸುತ್ತಿದ್ದಾರೆ. ಮೆಟ್ರೋದಲ್ಲಿ ವಿದ್ಯಾವಂತರೇ ಸಂಚರಿಸುತ್ತಿದ್ದು, ಅವರಿಗೆ ಇದರ ಬಗ್ಗೆ ಹೇಳುವ ಅಗತ್ಯವಿಲ್ಲ. ಅವರೇ ಅರ್ಥ ಮಾಡಿಕೊಳ್ಳಬೇಕು ಎಂದು ಮೆಟ್ರೋ ನಿಲ್ದಾಣದ ಸಿಬಂದಿಗಳು ತಿಳಿಸಿರುವುದಾಗಿ ವರದಿಯಾಗಿದೆ.