ಬಿಲಾಸ್ಪುರ, ಆ 30 (DaijiworldNews/DB): ಪತ್ನಿ ಪತಿಯ ಕಚೇರಿಗೆ ತೆರಳಿ ಆತನನ್ನು ತೆಗಳುವುದು ಕ್ರೌರ್ಯಕ್ಕೆ ಸಮಾನವಾದ ಕೃತ್ಯವಾಗಿದೆ ಎಂದು ಛತ್ತೀಸ್ಗಢ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇದೇ ವೇಳೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತಿಯ ಅರ್ಜಿಯನ್ನು ಪುರಸ್ಕರಿಸಿ ತೀರ್ಪು ನೀಡಿದ ರಾಯ್ಪುರ ಕೌಟುಂಬಿ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.
ಪತಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದನ್ನು ಪುರಸ್ಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಮತ್ತು ರಾಧಾಕಿಶನ್ ಅಗರವಾಲ್ ಅವರ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ
ಧಮ್ತಾರಿ ಜಿಲ್ಲೆಯ 32 ವರ್ಷದ ಯುವಕ ರಾಯ್ಪುರ ನಿವಾಸಿ 34 ವರ್ಷದ ಮಹಿಳೆಯನ್ನು 2010 ರಲ್ಲಿ ವಿವಾಹವಾಗಿದ್ದರು. ಬಳಿಕ ವಿವಿಧ ಕಾರಣಗಳಿಗಾಗಿ ವಿಚ್ಚೇದನ ನೀಡಬೇಕೆಂದು ಕೋರಿ ಯುವಕ ರಾಯ್ಪುರ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಪತ್ನಿ ನನ್ನ ಕಚೇರಿಗೆ ಬಂದು ನಿಂದಿಸುತ್ತಾಳೆ, ಹೆತ್ತವರು ಮತ್ತು ಕುಟುಂಬದವರನ್ನು ಭೇಟಿಯಾಗಲು ಬಿಡುತ್ತಿಲ್ಲ ಎಂಬುದಾಗಿ ಆರೋಪಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯವರು 2019 ರ ಡಿಸೆಂಬರ್ನಲ್ಲಿ ವಿಚ್ಛೇದನದ ತೀರ್ಪು ನೀಡಿತು. ಆದರೆ ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ವಿಚ್ಛೇದನ ತೀರ್ಪು ನೀಡಿದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದ್ದಾರೆ.
ಮಹಿಳೆ ಪರ ವಕೀಲ ಶಿಶಿರ್ ಶ್ರೀ ವಾಸ್ತವ ವಾದ ಮಂಡಿಸಿ, ಪತಿಯು ಪತ್ನಿಯನ್ನು ಕ್ರೌರ್ಯದಿಂದ ನಡೆಸಿರುವುದನ್ನು ಕೌಟುಂಬಿಕ ನ್ಯಾಯಾಲಯ ಗಮನಿಸಲು ವಿಫಲವಾಗಿದೆ. ವಿಚ್ಛೇದನಕ್ಕಾಗಿ ಸುಳ್ಳು ಪುರಾವೆಗಳನ್ನು ಸೃಷ್ಟಿಸಲು ಆಕೆಯ ಪತಿ ಪ್ರಯತ್ನಿಸುತ್ತಿದ್ದಾರೆ ಎಂದು ಗಮನ ಸೆಳೆದಿದ್ದರು. ಆದರೆ ಪತ್ನಿ ತನ್ನ ಪತಿಯ ಕಚೇರಿಗೆ ಭೇಟಿ ನೀಡಿ ನಿಂದಿಸುವುದು, ತೆಗಳುವುದು ಮಾಡುತ್ತಿದ್ದಳು ಎಂದು ಕೌಟುಂಬಿಕ ನ್ಯಾಯಾಲಯ ಹೇಳಿತ್ತು. ಇದನ್ನು ಹೈಕೋರ್ಟ್ ನ್ಯಾಯಪೀಠ ಎತ್ತಿ ಹಿಡಿದಿದ್ದು, ಕೌಟುಂಬಿಕ ನ್ಯಾಯಾಲಯದ ತೀರ್ಪಿನಲ್ಲಿ ಯಾವುದೇ ಹಸ್ತಕ್ಷೇಪ ಅಗತ್ಯವಿಲ್ಲ. ಆ ನ್ಯಾಯಾಲಯದ ತೀರ್ಮಾನವನ್ನು ನಾವು ಎತ್ತಿ ಹಿಡಿಯುತ್ತೇವೆ ಎಂದು ಪ್ರತಿಪಾದಿಸಿತು.