ನವದೆಹಲಿ, ಆ 30 (DaijiworldNews/MS): "ಮದ್ಯದಂತೆಯೇ ಅಧಿಕಾರ ಕೂಡ ಅಮಲೇರಿಸುತ್ತದೆ. ನಿಮಗೆ ಅಧಿಕಾರದ ಅಮಲು ಇದ್ದಂತೆ ತೋರುತ್ತದೆ" ಎಂದು ಜುಲೈನಲ್ಲಿ ವಾಪಾಸ್ ಪಡೆಯಲಾದ ಸರ್ಕಾರಿ ಮದ್ಯದ ಪರವಾನಗಿ ನೀತಿಯ ಕುರಿತು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು , ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬರೆದ ಪತ್ರದಲ್ಲಿನ ಹಲವು ಕಟುವಾದ ಸಾಲುಗಳಲ್ಲಿ ಇದು ಒಂದಾಗಿದೆ.
"ನೀವು ಮುಖ್ಯಮಂತ್ರಿಯಾದ ನಂತರ ನಾನು ನಿಮಗೆ ಮೊದಲ ಬಾರಿಗೆ ಪತ್ರ ಬರೆಯುತ್ತಿದ್ದೇನೆ, ಏಕೆಂದರೆ ನಿಮ್ಮ ಸರ್ಕಾರದ ಮದ್ಯ ನೀತಿಯ ಬಗ್ಗೆ ಇತ್ತೀಚಿನ ಸುದ್ದಿ ವರದಿಗಳಿಂದ ನನಗೆ ನೋವಾಗಿದೆ .ನೀವು ನಿಮ್ಮ 'ಸ್ವರಾಜ್' ಪುಸ್ತಕದಲ್ಲಿ ಮದ್ಯದ ನೀತಿಗಳ ಬಗ್ಗೆ ಆದರ್ಶಪ್ರಾಯವಾದ ವಿಷಯಗಳನ್ನು ಬರೆದಿದ್ದೀರಿ, ಅದಕ್ಕೆ ಪರಿಚಯವನ್ನು ಬರೆಯಲು ನೀವು ನನ್ನನ್ನು ಬಳಸಿಕೊಂಡಿದ್ದೀರಿ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ನೀವು, ಮನೀಶ್ ಸಿಸೋಡಿಯಾ ಮತ್ತು ಇತರರು ರಚಿಸಿದ" ಆಮ್ ಆದ್ಮಿ ಪಕ್ಷವು "ಈಗ ಯಾವುದೇ ಪಕ್ಷಕ್ಕಿಂತ ಭಿನ್ನವಾಗಿಲ್ಲ. ನಾನು ಸೂಚಿಸಿದಂತೆ ಜಾಗೃತಿ ಅಭಿಯಾನವನ್ನು ನಡೆಸಿದ್ದರೆ ಭಾರತದಲ್ಲಿ ಎಲ್ಲಿಯೂ ಇಂತಹ ತಪ್ಪು ಮದ್ಯ ನೀತಿ ರೂಪುಗೊಳ್ಳುತ್ತಿರಲಿಲ್ಲ" ಎಂದು ಹಜಾರೆ ಬೇಸರಿಸಿಕೊಂಡಿದ್ದಾರೆ.
ಅಣ್ಣಾ ಹಜಾರೆ ಅವರು 2011 ರಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ನಾಯಕರಾಗಿದ್ದರು, ಈ ಆಂದೋಲದ ಪರಿಣಾಮ ಎಎಪಿ ಪಕ್ಷ ಹೊರಹೊಮ್ಮಿತ್ತು.