ಪಣಜಿ, ಆ 30 (DaijiworldNews/DB): ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಸರ್ಕಾರವು ಈಗಾಗಲೇ ಹರಿಯಾಣ ಮುಖ್ಯಮಂತ್ರಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ತನಿಖೆಯ ಗೌಪ್ಯ ವರದಿಯನ್ನು ಸಲ್ಲಿಸಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ತನಿಖೆ ಭಾಗವಾಗಿ ಕೆಲವು ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಅಗತ್ಯವಿದೆ. ಹೀಗಾಗಿ ಗೋವಾ ಪೊಲೀಸರ ತಂಡವು ಇಂದು ಹರಿಯಾಣಕ್ಕೆ ತೆರಳಿದೆ. ತನಿಖೆಗೆ ಗೌಪ್ಯ ವರದಿಯನ್ನು ಈಗಾಗಲೇ ಅಲ್ಲಿನ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಹರಿಯಾಣ ಬಿಜೆಪಿ ನಾಯಕಿ ಹಾಗೂ ಟಿಕ್ಟಾಕ್ ತಾರೆ ಸೋನಾಲಿ ಫೋಗಟ್ ಆಗಸ್ಟ್ 23ರಂದು ತಮ್ಮಿಬ್ಬರು ಸಹಚರರೊಂದಿಗೆ ಗೋವಾಕ್ಕೆ ತೆರಳಿದ್ದರು. ಮರುದಿನ ಅವರನ್ನು ಉತ್ತರ ಗೋವಾದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಸಾವನ್ನಪ್ಪಿದ್ದರು. ಮೊದಲು ಆಕೆಗೆ ಹೃದಯಾಘಾತವಾಗಿದೆ ಎಂದು ಹೇಳಲಾಗಿದ್ದರೂ, ಬಳಿಕ ಆಕೆಯ ಕುಟುಂಬ ಇದೊಂದು ಕೊಲೆ ಎಂದು ಆರೋಪಿಸಿ ತನಿಖೆಗೆ ಒತ್ತಾಯಿಸಿದ್ದರು. ಬಳಿಕ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಇಬ್ಬರು ಸಹಚರರು ಸೇರಿದಂತೆ ಐವರನ್ನು ಬಂಧಿಸಿದ್ದರು.